ಕುಂದಾಪುರ,ಫೆ 21(MSP):ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ಸಮೀಪದ ಟಾಯ್ಲೆಟ್ ಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಎಂಜಿನ್ ಸ್ಪೋಟಗೊಂಡು ಕಾರಿನಲ್ಲಿದ್ದ ಕುಂದಾಪುರ ಮೂಲದ ನಾಲ್ವರು ಸಜೀವ ದಹನಗೊಂಡ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಚನ್ನರಾಯ ಪಟ್ಟಣದ ಉದಯಪುರ ಎಂಬಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ. ದುರ್ಘಟನೆಯಲ್ಲಿ ಸುಟ್ಟು ಹೋದವರನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ನಾಯಕವಾಡಿ ನಿವಾಸಿ ವಿವೇಕ ನಾಯಕ್ (39), ಪತ್ನಿ ರೇಶ್ಮಾ ಯಾನೆ ವಿವಾ, ಮಕ್ಕಳಾದ ವಿನಂತಿ(9) ಹಾಗೂ ವಿಘ್ನೇಷ್(5) ಎಂದು ತಿಳಿದು ಬಂದಿದೆ.
ವಿವೇಕ್ ನಾಯಕ್ ಅವರು ಮುಂಬೈ ಮೂಲದ ಸೈಕಾರ್ಜ್ ಎನ್ನುವ ಗಾರ್ಮೆಂಟ್ ಕಂಪೆನಿಯಲ್ಲಿ ಬೆಂಗಳೂರು ಕಚೇರಿಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು ಎಮದು ತಿಳಿದು ಬಂದಿದೆ. ಶುಕ್ರವಾರ ವಿವೇಕ್ ನಾಯಕ್ ಅವರ ಮೂಲ ಮನೆಯಾದ ಕುಂದಾಪುರದ ನಾಯಕವಾಡಿಯಲ್ಲಿ ಅವರ ತಂದೆಯ ಕಾರ್ಯಕ್ರಮವಿದ್ದ ಕಾರಣ ಬುಧವಾರ ರಾತ್ರಿ ಬೆಂಗಳೂರಿನಿಂದ ತನ್ನ ರಿಟ್ಜ್ ಕಾರಿನಲ್ಲಿ ಕುಟುಂಬ ಸಮೇತರಾಗಿ ಹೊರಟಿದ್ದರು.
ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಚನ್ನರಾಯಪಟ್ಟಣದ ಉದಯಪುರ ಎಂಬಲ್ಲಿ ಬರುತ್ತಿದ್ದಂತೆ ಕಾರು ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿದ್ದು, ವೇಗ ಹೆಚ್ಚಿಸಿಕೊಂಡು ಎಡ ಬದಿಯಲ್ಲಿದ್ದ ಶೌಚಾಲಯಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಒಮ್ಮಿಂದೊಮ್ಮೆಲೇ ಸ್ಪೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿದಿದೆ. ಘಟನೆಯಲ್ಲಿ ಕಾರಿನಿಮದ ಹೊರಬಾರಲಾರದ ನಾಲ್ವರೂ ಸಂಪೂರ್ಣ ಸುಟ್ಟು ಹೋಗಿದ್ದಾರೆ. ಚನ್ನರಾಯಪಟ್ಟಣದ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.