ಚಿತ್ರದುರ್ಗ, ಫೆ 21(SM): ದಿನಗಳ ಹಿಂದೆ ಶಾಸಕ ಸಿ.ಟಿ. ರವಿಯವರ ಕಾರು ಡಿಕ್ಕಿ ಹೊಡೆದು ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಮರೆಯುವ ಮೊದಲೇ, ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿಯ ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗುರುವಾರ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.
ಗಾಯಾಳುವನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಹಿರಿಯೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ಸಂದರ್ಭ ಶಾಸಕಿ ಕಾರಿನಲ್ಲಿ ಇರಲಿಲ್ಲ ಎನ್ನಲಾಗಿದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಪ್ರವಾಸಿ ಮಂದಿರಕ್ಕೆ ಬಿಟ್ಟು ಕಾರಿನ ಚಾಲಕ ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಆದರೆ ಇದನ್ನು ನಿರಾಕರಿಸಿರುವ ಶಾಸಕಿಯವರು, ನನ್ನ ಕಾರು ಯಾವುದೇ ವ್ಯಕ್ತಿಗೆ ಡಿಕ್ಕಿಯಾಗಿಲ್ಲ. ನನ್ನ ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕಾರು ಬಂದು ನಿಲ್ಲುವ ಮೊದಲೇ ವ್ಯಕ್ತಿಯೊಬ್ಬರು ಅಲ್ಲಿ ಕುಡಿದು ಬಿದ್ದಿದ್ದರು. ಪ್ರವಾಸಿ ಮಂದಿರದ್ ಸಿಬ್ಬಂದಿಗೂ ಈ ವಿಚಾರವನ್ನು ನಾನು ತಿಳಿಸಿದ್ದೇ ಎಂಬುವುದಾಗಿ ಶಾಸಕಿ ಸ್ಪಷ್ಟಪಡಿಸಿದ್ದಾರೆ.