ನವದೆಹಲಿ, ಫೆ 22(MSP): ಈ ವರ್ಷದ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು, ಆನ್ ಲೈನ್ ಮೂಲಕ ಮತ ಚಲಾಯಿಸುವ ಸೌಲಭ್ಯ ಹೊಂದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಆನ್ ಲೈನ್ ಮೂಲಕ ಮತ ಚಲಾಯಿಸಲು ಅವಕಾಶ ನೀಡಿದೆ ಎಂಬ ಸಾಮಾಜಿಕ ಜಾಲತಾಣದ ಸಂದೇಶವು ಸತ್ಯಕ್ಕೆ ದೂರವಾಗಿದೆ ಎಂದು ಚುನಾವಣಾ ಆಯೋಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಈ ರೀತಿಯ ಯಾವುದೇ ವಿಶೇಷ ಸೌಲಭ್ಯವನ್ನು ಇನ್ನೂ ಹೊಂದಿಲ್ಲ ಎಂದು ಆಯೋಗದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಒಂದು ವೇಳೆ ಅನಿವಾಸಿ ಭಾರತೀಯರು ಆನ್ ಲೈನ್ ಮೂಲಕ ತಮ್ಮ ಮತ ಚಲಾಯಿಸಬೇಕೆಂದರೆ ಜನರ ಪ್ರಾತಿನಿಧಿತ್ವ ಕಾಯ್ದೆಗೆ ತಿದ್ದುಪಡಿ ತರಬೇಕು. ಇದುವರೆಗೆ ಈ ಕಾಯ್ದೆಗೆ ಅಂತಹ ಯಾವುದೇ ತಿದ್ದುಪಡಿ ತಂದಿಲ್ಲ ಎಂದು ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿಅಂಶ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 3.10 ಕೋಟಿ ಅನಿವಾಸಿ ಭಾರತೀಯರಿದ್ದಾರೆ. ಎನ್ ಆರ್ ಐ ಗಳು ಆನ್ ಲೈನ್ ಮೂಲಕ ಮತ ಚಲಾಯಿಸುವ ಬಗ್ಗೆ ಚುನಾವಣಾ ಆಯೋಗದ ತಜ್ಞರ ಸಮಿತಿ ಅಧ್ಯಾಯನ ನಡೆಸಿ ಇ-ವೋಟಿಂಗ್ ಬೇಡ ಅನ್ನುವ ನಿರ್ಧಾರಕ್ಕೆ ಬಂದಿದೆ. ಇದಕ್ಕೆ ಬದಲಾಗಿ ಪ್ರಾಕ್ಸಿ ವೋಟಿಂಗ್ ಗೆ ಅನುಮತಿ ನೀಡಿದೆ. ಆದರೆ ಪ್ರಾಕ್ಸಿ ವೋಟಿಂಗ್ ಹಕ್ಕು ನೀಡುವ ಮಸೂದೆ ರಾಜ್ಯಸಭೆಯಲ್ಲಿ ಇನ್ನೂ ಅನುಮೋದನೆಗೊಂಡಿಲ್ಲ.
ಹೀಗಾಗಿ ಅನಿವಾಸಿ ಭಾರತೀಯರು ತಮ್ಮ ಕ್ಷೇತ್ರದಲ್ಲಿ ತಮ್ಮ ಮೂಲ ಪಾಸ್ ಪೋರ್ಟ್ ತೋರಿಸಿ ಓಟು ಚಲಾಯಿಸಬೇಕಾಗುತ್ತದೆ.