ಬೆಳಗಾವಿ, ಫೆ 22(SM): ಮುಂದೆ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇದೀಗ ವಿರೋಧಗಳು ಕೇಳಿ ಬರುತ್ತಿವೆ. ಸಿದ್ದರಾಮಯ್ಯನವರ ಅಪ್ಪನಾಣೆ ನರೇಂದ್ರ ಮೋದಿಯವರೇ ದೇಶದ ಮುಂದಿನ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ರಾಜ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಅಪ್ಪನಾಣೆಗೂ ಮುಂದಿನ ಪ್ರಧಾನಿ ನರೇಂದ್ರ ಮೋದಿಯೇ. ಅದರಲ್ಲಿ ಯಾವುದೇ ಸಂಶಯವಿಲ್ಲ. ಈ ಮೂಲಕ ಹಿಂದೆ ಮೋದಿ ಅವರಪ್ಪನಾಣೆ ಮತ್ತೆ ಪ್ರಧಾನಿ ಆಗಲ್ಲ ಎಂದಿದ್ದ ಸಿದ್ದರಾಮಯ್ಯನವರ ಹೇಳಿಕೆಗೆ ಸಚಿವ ಜಿಗಜಿಣಗಿ ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲೂ ಕೂಡ ಬಿಜೆಪಿ ಪಾರಮ್ಯಗಳಿಸಲಿದೆ ಎಂದ ಅವರು, ನಾನು ಅಭಿವೃದ್ಧಿ ಮಾಡಿದ್ದಕ್ಕೆ ನಿರಂತರವಾಗಿ ಗೆಲುವು ಸಾಧಿಸುತ್ತ ಬಂದಿದ್ದೇನೆ. ಮುಂದಿನ ಬಿಜೆಪಿ ಅಭ್ಯರ್ಥಿ ಕೂಡ ನಾನೇ. ಗೆಲುವು ಸಾಧಿಸೋದು ಸಹ ನಾನೇ ಎಂದು ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.