ಬೆಂಗಳೂರು, ಫೆ 23(SM): ಯಲಹಂಕ ವಾಯುನೆಲೆಯ ಮುಂಭಾಗದ ಡೊಮೆಸ್ಟಿಕ್ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ೩೦೦ಕ್ಕೂ ಅಧಿಕ ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಯ ಬಳಿಕ ಏರೋ ಶೋ ಅರ್ಧಕ್ಕೆ ಮೊಟಕುಗೊಂಡಿದೆ.
ಯಲಹಂಕ ಪಾರ್ಕಿಂಗ್ ಭಾಗದಲ್ಲಿ ಬೆಳೆದಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಸುಮಾರು ೩೦೦ ಕ್ಕೂ ಅಧಿಕ ಕಾರುಗಳು ಬೆಂಕಿಯ ಕೆನ್ನಾಲಗೀ ಧಗಧಗನೆ ಉರಿದು ಭಸ್ಮವಾಗಿವೆ.
ಇನ್ನು, ಈ ವೇಳೆ ತೇಜಸ್ ಯುದ್ದ ವಿಮಾನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ವಿಮಾನ ಹಾರಾಟದಲ್ಲಿ ತೊಡಗಿದ್ದರು. ಸಿಂಧು ಸುಮಾರು 15 ನಿಮಿಷಗಳ ಕಾಲ ತೇಜಸ್ ವಿಮಾನ ಹಾರಾಟದಲ್ಲಿ ಪಾಲ್ಗೊಂಡರು. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2019ರ ನಾಲ್ಕನೇ ದಿನವಾದ ಶನಿವಾರದಂದು ಏರ್ ಶೋ ವೀಕ್ಷಣೆಗೆ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.
ಅಗ್ನಿ ಅವಘಡ ನಡೆದ ಬಳಿಕ ಏರ್ ಪೋರ್ಟ್ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಹಲವು ನಿಮಿಷಗಳ ಕಾಲ ಟ್ರಾಫಿಕ್ ಜಾಂ ಉಂಟಾಗಿತ್ತು. ಪರಿಸರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.