ಬೆಂಗಳೂರು, ಫೆ 23(SM): ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲು ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.
ಪ್ರಯಾಣದರ ಏರಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಅನುಗುಣವಾಗಿ ಪ್ರಯಾಣ ದರ ಏರಿಕೆ ಮಾಡಲಾಗುವುದು. ಹಾಗಾಗಿ ಪ್ರಯಾಣಿಕರ ಟಿಕೆಟ್ ದರವನ್ನು ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಂತಿಮ ಆದೇಶ ಬಂದಿಲ್ಲ. ಆದೇಶ ಬಂದ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದೆಂದರು.
2013-14ರಲ್ಲಿ ಅಂತಿಮವಾಗಿ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆ ಬಳಿಕ ಇದುವರೆಗೂ ಸರ್ಕಾರಿ ಬಸ್ಗಳ ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಆದರೆ ಅದರ ಬಳಿಕ ಹಲವು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಆದರೆ ಟಿಕೆಟ್ ಬೆಲೆ ಮಾತ್ರ ಏರಿಕೆಯಾಗಿಲ್ಲ. ಆದರೆ ಇದೀಗ ಅನಿವಾರ್ಯವಾಗಿ ಟಿಕೆಟ್ ದರ ಏರಿಕೆ ಮಾಡಲೇ ಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.