ಕಾಸರಗೋಡು,ಫೆ 24 (MSP): ಜಿಲ್ಲೆಯಲ್ಲಿ ಎಚ್1ಎನ್1 ವೈರಸ್ ಕಂಡುಬಂದಿದ್ದು , ಪೆರಿಯ ನವೋದಯ ವಿದ್ಯಾಲಯವೊಂದರಲ್ಲೇ ಐವರು ವಿದ್ಯಾರ್ಥಿಗಳಲ್ಲಿ ಎಚ್1ಎನ್1 ವೈರಸ್ ಪತ್ತೆಯಾಗಿದೆ. ಇದಲ್ಲದೆ ಈ ಶಾಲೆಯ ಸುಮಾರು 67ರಷ್ಟು ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡು ಬಂದಿದೆ.
ಐದು ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದಾಗ ಎಚ್1ಎನ್1 ಸೋಂಕು ಕಂಡು ಬಂದಿದೆ. ಸೋಂಕು ಲಕ್ಷಣ ಪತ್ತೆಯಾದ ಉಳಿದ ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ವಿಶೇಷವಾಗಿ ತೆರೆದ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
37 ವಿದ್ಯಾರ್ಥಿ ಮತ್ತು 30 ವಿದ್ಯಾರ್ಥಿನಿಗಳಲ್ಲಿ ರೋಗ ಲಕ್ಷಣ ಪತ್ತೆಯಾಗಿದೆ. 550ರಷ್ಟು ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿಯೇ ವಾಸ್ತವ್ಯ ಮಾಡಿ ಓದುತ್ತಿದ್ದಾರೆ. ಸೋಂಕು ಹರಡಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಸೋಂಕು ಹರಡದಂತೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.