ಬೆಂಗಳೂರು,ಫೆ 25(MSP): ವಿಮಾನ ಢಿಕ್ಕಿ ಹೊಡೆದು ವಿಮಾನ ನಿಲ್ದಾಣದ ನೌಕರನ ಬೆನ್ನು ಮೂಳೆ ಮುರಿದು ಗಂಭೀರ ಗಾಯಗೊಂಡ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಏರ್ ಇಂಡಿಯಾ ವಿಮಾನ ಸಂಸ್ಥೆಯ ನೌಕರನೋರ್ವನಿಗೆ ಇಂಡಿಗೋ ವಿಮಾನ ಢಿಕ್ಕಿ ಹೊಡೆದಿದ್ದು ತನ್ನ ನೌಕರಿನಿಗೆ ಪರಿಹಾರ ನೀಡುವಂತೆ ಇಂಡಿಗೋ ಸಂಸ್ಥೆಯನ್ನು ಒತ್ತಾಯಿಸಿದೆ. ಗಾಯಾಳುವನ್ನು ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್ ನ ನೌಕರ ಶಿವ ಶಂಕರ್ ಎಂದು ಗುರುತಿಸಲಾಗಿದ್ದು, ಅವರು ಟರ್ಮಿನಲ್ ಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರಂತ ನಡೆದಿದೆ.
ಘಟನೆ ಬಗ್ಗೆ ಏರ್ ಇಂಡಿಗೋ ವಿಮಾನ ಸಂಸ್ಥೆ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಘಟನೆಯಲ್ಲಿ ಏರ್ ಇಂಡಿಯಾದ ಸಿಬ್ಬಂದಿ ಯಾವುದೇ ಅನಾಹುತ ಸಂಭವಿಸದೇ ಪಾರಾಗಿದ್ದಾರೆ. ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಕುರಿತು ಇಂಡಿಗೋ ಸಂಸ್ಥೆ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದೆ.
ಅತ್ತ ಕಡೆ ಏರ್ ಇಂಡಿಯಾ ಕೂಡಾ ಹೇಳಿಕೆ ಬಿಡುಗಡೆ ಮಾಡಿ ಪರಿಹಾರಕ್ಕೆ ಆಗ್ರಹಿಸಿದೆ. ಇಂಡಿಗೋ ವಿಮಾನ ನಮ್ಮ ನೌಕರ ಶಿವ ಶಂಕರ್ ಗೆ ಢಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ನಮ್ಮ ನೌಕರನಿಗೆ ಗಂಭೀರ ಗಾಯಗಳಾಗಿದ್ದು, ಬೆನ್ನೆಲುಬು ಮುರಿದಿದೆ, ಆತನ ಚೇತರಿಕೆಗೆ ನಾವು ಪ್ರಾರ್ಥಿಸುತ್ತಿದ್ದೇವೆ. ಇಂಡಿಗೋ ಸಂಸ್ಥೆ ಸೂಕ್ತ ಪರಿಹಾರ ನೀಡಬೇಕು, ಇಲ್ಲವಾದರೆ ಕಾನೂನು ಕ್ರಮವನ್ನೂ ಎದುರಿಸಬೇಕೆಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.