ನವದೆಹಲಿ,ಫೆ 25(MSP): ಪ್ರಪಂಚದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರ ಪಟ್ಟಿಯನ್ನು ನಿರ್ವಹಿಸುತ್ತಿರುವ ಕೆಲವೇ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರಿದ್ದು, ಈ ಪಟ್ಟಿಯಲ್ಲಿ ಲೈಂಗಿಕ ಅಪರಾಧ ಎಸಗಿದ 5 ಲಕ್ಷ ಕಾಮಪಿಪಾಶುಗಳ ಹೆಸರು ಸೇರ್ಪಡೆಗೊಳಿಸಲಾಗಿದೆ.
ದೇಶದ ವಿವಿಧೆಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪ ಸಾಬೀತಾದ ಅಪರಾಧಿಗಳ ಐದು ಲಕ್ಷ ಜನರ ಹೆಸರನ್ನು "ರಾಷ್ಟ್ರೀಯ ಲೈಂಗಿಕ ಅಪರಾಧಿಗಳ ಪಟ್ಟಿ'ಗೆ ಸೇರ್ಪಡೆಗೊಳಿಸಲಾಗಿದ್ದು , ಈ ವ್ಯಕ್ತಿಗಳ ವಿವರಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸುಲಭವಾಗಿ ಲಭ್ಯವಾಗಲಿವೆ. ಇದರಲ್ಲಿ ಯಾವ ಅಪರಾಧಿ ಮಹಿಳೆಯರ ವಿರುದ್ಧ ಅಪರಾಧ ಸಂಹಿತೆಯ ಯಾವ ವಿಭಾಗಗಳಡಿ ಅಪರಾಧ ಎಸಗಿದ್ದಾನೆ ಎಂಬೆಲ್ಲ ವಿವರಗಳು ಕೂಡಾ ದಾಖಲಾಗಿದೆ
ಈ ಪಟ್ಟಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನಿರ್ವಹಿಸುತ್ತಿದ್ದು, ಇದರಲ್ಲಿ ಅತ್ಯಾಚಾರ, ಗ್ಯಾಂಗ್ ರೇಪ್, ಪೋಕ್ಸೋ ಹಾಗೂ ಮಹಿಳೆಯರನ್ನು ಚುಡಾಯಿಸಿದ ಅಪರಾಧಿಗಳ ವಿವರಗಳು ಇದರಲ್ಲಿ ಲಭ್ಯವಾಗಲಿದೆ.
ಈವರೆಗೆ ಇಂತಹ ಐದು ಲಕ್ಷ ಅಪರಾಧಿಗಳ ವಿವರಗಳನ್ನು ಅಪ್ಲೋಡ್ ಮಾಡಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ವ್ಯಕ್ತಿಗಳ ಫೋಟೋ ಮತ್ತು ಗುರುತಿನ ಚೀಟಿ, ಫಿಂಗರ್ ಪ್ರಿಂಟ್ ಮತ್ತು ಆತನ ವಿಳಾಸ ಲಭ್ಯವಿದ್ದು, ಇದು ಪೊಲೀಸರು ಹಾಗೂ ಇತರ ತನಿಖಾ ಸಂಸ್ಥೆಗಳಿಗೆ ಲಭ್ಯವಿರಲಿದೆ.