ನವದೆಹಲಿ,ಫೆ 26(MSP):ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯೂ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಿದಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದೆ ಎಂದು ವರದಿಯಾಗಿದೆ.
ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ ಪ್ರತೀಕಾರಕ್ಕಾಗಿ ಹಾತೊರೆಯುತ್ತಿದ್ದು, ಇದೇ ಹಿನ್ನಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆಯ ಅಡಗು ದಾಣಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದೆ. ಮಂಗಳವಾರ ಬೆಳಿಗ್ಗೆ 3.30ರ ಸುಮಾರಿಗೆ 12 ಮಿರಾಜ್-2000 ಜೆಟ್ ಯುದ್ಧ ವಿಮಾನಗಳು ದಾಳಿ ನಡೆಸಿದೆ. ಸುಮಾರು 1000 ಕೆಜಿ ಬಾಂಬ್ ಅಡಗು ದಾಣಗಳ ಮೇಲೆ ದಾಳಿ ಮಾಡಿದ್ದು ಇದರ ಪರಿಣಾಮ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಕಂಟ್ರೋಲ್ ರೂಂಗಳು ಧ್ವಂಸವಾಗಿದೆ.
ಇದಕ್ಕೆ ಪೂರಕವೆಂಬಂತೆ ಪಾಕ್ ನೆಲದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಬಹುದೆಂದು ಹೆದರಿ ಕುಳಿತಿರುವ ಪಾಕಿಸ್ತಾನ ಇದೀಗ ಭಾರತೀಯ ಸೇನೆಯ ಯುದ್ಧ ವಿಮಾನ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳ ಬಂದಿದೆ ಎಂದು ಗಂಭೀರ ಆರೋಪ ಮಾಡಿರುವುದು ಇದಕ್ಕೆ ಪುಷ್ಠಿ ತಂದಿದೆ. ಮಾತ್ರವಲ್ಲದೆ ಪಾಕ್ ವಾಯುಪಡೆ ಸೂಕ್ತ ಪ್ರತ್ಯುತ್ತರ ನೀಡಿದೆ ಹೀಗಾಗಿ ಯುದ್ಧ ವಿಮಾನ ವಾಪಸಾಗಿದೆ ಎಂದು ಪಾಕಿಸ್ಥಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವಿಟ್ಟರ್ ಮೂಲಕ ಭಾರತದ ವಿರುದ್ಧ ಆರೋಪ ಮಾಡಿದ್ದಾರೆ.