ಇಸ್ಲಾಮಾಬಾದ್: ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ಪ್ರತೀಕಾರದ ಉತ್ತರ ನೀಡಿದ ಬಳಿಕ ಪಾಕಿಸ್ತಾನ ಬಾಲಸುಟ್ಟ ಬೆಕ್ಕಿನಂತಾಗಿದೆ. ಇದಕ್ಕೆ ಪೂರಕವೆಂಬಂತೆ ಪಾಕಿಸ್ತಾನದ ಸಂಸತ್ ನಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಘೋಷಣೆ ಕೂಗಲಾಗಿದೆ.
1971 ರ ಯುದ್ದದ ನಂತರ ಭಾರತೀಯ ವಾಯುಪಡೆಯ ಯುದ್ದ ವಿಮಾನಗಳು ದೇಶದ ಗಡಿ ದಾಟಿರುವುದು ಇದೇ ಮೊದಲು. 1999ರ ಕಾರ್ಗಿಲ್ ಯುದ್ದದ ವೇಳೆಯಲ್ಲಿಯೂ ಆಗಿನ ಪ್ರಧಾನಿಯಾಗಿದ್ದ ವಾಜಪೇಯಿ ಸರ್ಕಾರ ಯುದ್ದ ವಿಮಾನಗಳ ಕಾರ್ಯಾಚರಣೆಯನ್ನು ಭಾರತದ ವಶದಲ್ಲಿರುವ ಗಡಿ ನಿಯಂತ್ರಣ ರೇಖೆಯವರೆಗೆ ಮಾತ್ರ ಸೀಮಿತಗೊಳಿಸಿತ್ತು. ಆದರೆ ಇಂದು ಮುಂಜಾನೆ ಭಾರತದ ದೇಶದ ಗಡಿ ದಾಟಿ ಯುದ್ದ ವಿಮಾನಗಳು ಉಗ್ರ ನೆಲೆಯನ್ನು ದ್ವಂಸಗೊಳಿಸಿದೆ.
ತುರ್ತು ಕಲಾಪ ಪ್ರಾರಂಭವಾದಾಗ , ಪಾಕ್ ಗೆ ಭಾರತದಿಂದ ಅವಮಾನವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿ ಪಾಕ್ ಪ್ರಧಾನಿ ಇಮ್ರಾನ್ ವಿರುದ್ಧ ಶೇಮ್, ಶೇಮ್ ಎಂಬ ಘೋಷಣೆ ಕೂಗಿದ್ದಾರೆ. ಕಳೆದ 35 ವರ್ಷಗಳಲ್ಲಿ ನಡೆಯದ ದಾಳಿ ಇಂದು ನಡೆದಿದ್ದು ಈ ದಾಳಿಯಿಂದ ಪಾಕ್ ಗೆ ಮುಖಭಂಗವಾಗಿದೆ ಪ್ರಧಾನಿ ಖಾನ್ ಅವರನ್ನು ಸಂಸತ್ತಿನಲ್ಲಿ ತರಾಟೆಗೆತ್ತಿಕೊಂಡಿದ್ದಾರೆ. ಭಾರತ ನಡೆಸಿದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಪಾಕ್ ಸಂಸದರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.