ಬೆಂಗಳೂರು, ಫೆ 26(SM): ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಸೀಟು ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಲು ಎರಡೂ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿತ್ತು. ಕರೆದಿದ್ದ ಸಭೆ ಒಮ್ಮತಕ್ಕೆ ಬಾರದೇ ಅಂತ್ಯವಾಗಿದೆ.
ಸುಮಾರು ಒಂದು ತಾಸಿಗೂ ಅಧಿಕ ಕಾಲ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಭೆ ನಡೆಸಿದರೂ ಆದರೆ ಒಮ್ಮತ ಮೂಡಲಿಲ್ಲ. ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪಾಲ್ಗೊಂಡಿದ್ದರು.
ಲೋಕಸಭೆ ಸ್ಪರ್ಧೆಗೆ ತಮಗೆ 12 ಸೀಟುಗಳನ್ನು ಬಿಟ್ಟು ಕೊಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಆದರೆ, ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಳ್ಳದಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರು ಅಭ್ಯರ್ಥಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಘೋಷಣೆ ಮಾಡಿದ್ದಾರೆ. ಇನ್ನು ಮಾರ್ಚ್ ಮೊದಲ ವಾರದಲ್ಲಿ ಸಮನ್ವಯ ಸಮಿತಿ ಸಭೆ ಕರೆಯಲಾಗಿದ್ದು, ಅಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ರಾಹುಲ್ ಗಾಂಧಿ ಜತೆಯೂ ಚರ್ಚಿಸಲಾಗಿದ್ದು, ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಸೀಟು ಹಂಚಿಕೆ ವಿಚಾರ ಕುತೂಹಲವನ್ನು ಕೆರಳಿಸಿದೆ.