ಬೆಂಗಳೂರು,ಫೆ 28(MSP): ಪಾಕ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯಿಂದ ಬಿಜೆಪಿಗೆ ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆಯಿಂದ ಬಿಜೆಪಿಯ ಮರ್ಯಾದೆಯನ್ನು ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತರಾಷ್ಟೀಯ ಮಟ್ಟದಲ್ಲೂ ಹರಾಜು ಹಾಕಿದ್ದಾರೆ. ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅನುಕೂಲವಾಗಲಿದೆ ಎಂದ ಯಡಿಯೂರಪ್ಪ ಹೇಳಿಕೆ ಬಿಜೆಪಿ ಮಾತ್ರವಲ್ಲದೆ, ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ನೆಟ್ಟಿಗರು ಕೂಡಾ ಯಡ್ದಿಗೆ ಛೀಮಾರಿ ಹಾಕಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ರಾಜಕೀಯ ಪಕ್ಷ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ತನ್ನ ಟ್ವಿಟರ್ ಖಾತೆಯಲ್ಲಿ ಗುರುವಾರ ಟ್ವೀಟ್ ಮಾಡಿ, ಈ ವಿಚಾರವನ್ನು ಗೇಲಿ ಮಾಡಿದೆ. 22 ಸ್ಥಾನ ಗೆಲ್ಲಲು ಯುದ್ದದ ಗಿಮಿಕ್ ಬೇಕಾ ಎಂದು ಪ್ರಶ್ನಿಸಿದೆ.
ಇದಲ್ಲದೆ ಭಾರತದ ವಾಯುಪಡೆಯ ವರ್ತನೆ, ಯುದ್ಧದತ್ತ ಆಸಕ್ತಿ, ಬಂಧನದಲ್ಲಿರುವ ಪೈಲೆಟ್, ಗಡಿಯಲ್ಲಿ ಜನರ ಜೀವನ ನಿಮಗೆ 22 ಸ್ಥಾನಗಳನ್ನು ಗೆಲ್ಲುವ ಮಾರ್ಗದಂತೆ ಕಾಣಿಸುತ್ತಿದೆ ಯುದ್ಧವೆನ್ನುವುದು ನಿಮಗೆ ಚುನಾವಣೆಯ ಆಟವೇ?’ ಎಂದು ಪಿಟಿಐ ಪಕ್ಷ ಟ್ವಿಟರ್ನಲ್ಲಿ ಪ್ರಶ್ನಿಸಿ ಅವಮಾನಿಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿರುವ ವಿ.ಕೆ.ಸಿಂಗ್ ಅವರು ಟ್ವಿಟ್ಟರ್ ನಲ್ಲೇ ಯಡಿಯೂರಪ್ಪಗೆ ಮಂಗಳಾರತಿ ಮಾಡಿದ್ದಾರೆ. ನಮ್ಮ ದೇಶಕ್ಕಾಗಿ ನಡೆಸಿದ ಕಾರ್ಯಾಚರಣೆ ಚುನಾವಣೆಯಲ್ಲಿ ’ಒಂದಷ್ಟು ’ ಸೀಟುಗಳನ್ನು ಗೆಲ್ಲಲು ಮಾಡಿದ್ದಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಭಾರತದ ಹಿತಕ್ಕಾಗಿ ಹಾಗೂ ಭಾರತೀಯರ ಸುರಕ್ಷತೆಗಾಗಿ ನಾವು ಈ ಕಾರ್ಯಾಚರಣೆ ಮಾಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.