ನವದೆಹಲಿ, ಡಿ 7 (DaijiworldNews/HR): ಆರ್ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ ಗಳಿಂದ ಶೇ.6.25ಕ್ಕೆ ಏರಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗವರ್ನರ್ ಶಕ್ತಿಕಾಂತ್ ದಾಸ್, ಆಹಾರ ಮತ್ತು ಸರಕುಗಳ ಬೆಲೆಗಳು ಏರಿಕೆಯಾಗುತ್ತಿದ್ದು, ರೆಪೋ ದರವನ್ನು 35 ಬೇಸಿಸ್ ಪಾಯಿಂಟ್ ಗಳಿಂದ ಶೇ. 6.25 ಕ್ಕೆ ಏರಿಕೆ ಮಾಡಲಾಗಿದೆ ಎಂದಿದ್ದಾರೆ.
ಇನ್ನು ರೆಪೊ ದರವು ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣವನ್ನು ಎರವಲು ಪಡೆಯುವ ದರವಾಗಿದ್ದು, ಕೇಂದ್ರೀಯ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸಿದರೆ, ಬ್ಯಾಂಕುಗಳು ಚಿಲ್ಲರೆ ಮತ್ತು ಇತರ ಸಾಲಗಳಿಗಾಗಿ ಸಾಲ ಪಡೆಯುವ ವೆಚ್ಚವೂ ಹೆಚ್ಚಾಗುತ್ತದೆ.
ಗೃಹ ಸಾಲಗಳು ಮತ್ತು ವಾಹನ ಸಾಲಗಳು ಸೇರಿದಂತೆ ಕೆಲವು ಚಿಲ್ಲರೆ ಸಾಲಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿದ ಬಾಹ್ಯ ಮಾನದಂಡದೊಂದಿಗೆ ಲಿಂಕ್ ಮಾಡಲಾಗಿದೆ.