ನವದೆಹಲಿ,ಮಾ 01 (MSP): ಪಾಕ್ ಯುದ್ದ ವಿಮಾನಗಳನ್ನು ಹಿಮ್ಮೆಟಿಸಿ ಪಾಕ್ ನೆಲದಲ್ಲಿ ಬಂಧಿಯಾದ ವಿಂಗ್ ಕಮಾಂಡರ್ ಅಭಿನಂದನ್ ಇಂದು ತಾಯ್ನಾಡಿಗೆ ವಾಪಸಾಗುತ್ತಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಆದರೆ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವರ ಹಿನ್ನಲೆಯಲ್ಲಿ ಗಮನಿಸಿದಾಗ ಭಾರತಾಂಬೆಯ ಸೇವೆ ಎನ್ನುವುದು ರಕ್ತಗತವಾಗಿಯೇ ಬಂದಿದೆ. ಯಾಕೆಂದರೆ ವರ್ಧಮಾನ್ ಕುಟುಂಬಸ್ಥರು ತಲೆಮಾರುಗಳಿಂದಲೇ ಭಾರತೀಯ ಸೇನೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಎರಡನೇ ಮಹಾಯುದ್ಧದ ಸಮಯದಿಂದಲೇ ವರ್ಧಮಾನ್ ಅವರ ಪೂರ್ವಜರು ಭಾರತದ ವಾಯುಸೇನೆಗಾಗಿ ಬದುಕು ಮುಡಿಪಾಗಿಟ್ಟಿದ್ದಾರೆ. ಅಭಿನಂದನ್ ತಂದೆ ಈ ಹಿಂದೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಇನ್ನು ಎರಡನೇ ಮಹಾಯುದ್ಧ ಸಮಯದಲ್ಲಿ ಭಾರತೀಯ ವಾಯುಪಡೆಯಲ್ಲಿ ಅಭಿನಂದನ್ ತಾತ ಸಿಂಹಕುಟ್ಟಿ ಕೆಲಸ ಮಾಡಿದ್ದರು. ವರ್ತಮಾನ್ ಭಾರತೀಯ ವಾಯುಪಡೆಯ ಪೂರ್ವ ಏರ್ ಕಮಾಂಡ್ ನ ಕಮಾಂಡಿಂಗ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡ ನಂತರ 40 ವಿವಿಧ ರೀತಿಯ ಯುದ್ಧ ವಿಮಾನಗಳಲ್ಲಿ ಸೇವೆ ಸಲ್ಲಿಸಿದ್ದರು.