ವಾಘಾ ಗಡಿ, ಮಾ 01 (MSP): ಪಾಕಿಸ್ತಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರ ಸಂಜೆ ಪಾಕಿಸ್ತಾನದ ವಾಘಾ ಗಡಿಯಿಂದ ಭಾರತದ ಅಟಾರಿ ಗಡಿ ಮೂಲಕ ತಾಯ್ನಾಡಿಗೆ ಮರಳಲಿದ್ದಾರೆ. ಪಾಕ್ ಸೇನೆ ಮೊದಲು ಭಾರತದ ಬಾರ್ಡರ್ ಸೆಕ್ಯೂರಿಟಿ ಪೋರ್ಸ್ (ಬಿಎಸ್’ಎಫ್) ಗೆ ಅಭಿನಂದನ್ ಅವರನ್ನು ಹಸ್ತಾಂತರಿಸಿದ್ದು, ಬಿಎಸ್’ಎಫ್ ಬಳಿಕ ವಾಯುಸೇನೆಗೆ ವೀರಪುತ್ರ ಅಭಿನಂದನ್ ಅವರನ್ನು ಹಸ್ತಾಂತರಿಸಿದ್ದಾರೆ.
ಏರ್ವೈಸ್ ಮಾರ್ಷಲ್ಗಳಾದ ಪ್ರಭಾಕರನ್ ಮತ್ತು ಆರ್ಜಿಕೆ ಕಪೂರ್ ಗಡಿಯಲ್ಲಿ ಕಾಯುತ್ತಿದ್ದು, ಅಭಿನಂದನ್ ಪೋಷಕರು, ವಾಯುಪಡೆ ಮತ್ತು ಇತರ ಅಧಿಕಾರಿಗಳು, ಅಭಿನಂದನ್ ಅವರನ್ನು ಸ್ವಾಗತಿಸಿ ದೇಶದೊಳಕ್ಕೆ ಕರೆತಂದಿದ್ದಾರೆ.ವಾಘಾ ಗಡಿಯಲ್ಲಿ ಭದ್ರತಾ ಪಡೆಗಳ ಜತೆಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದು, ವೀರ ಯೋಧನಿಗೆ ವೀರೋಚಿತ ಸ್ವಾಗತ ಕೋರಿದ್ದಾರೆ.
ಫೆಬ್ರವರಿ 27ರಂದು ಪಾಕ್ ವಾಯುಪಡೆ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಬಂದಾಗ ಮಿಗ್-21 ಬೈಸನ್ ವಿಮಾನದಲ್ಲಿ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು. ಬಳಿಕ ಅವರ ವಿಮಾನವನ್ನು ಪಾಕ್ ಹೊಡೆದುರರುಳಿಸಿತ್ತು ಈ ವೇಳೆ ಕೆಳಕ್ಕೆ ಜಿಗಿದ ಅವರು ಪಾಕ್ ಪಡೆಗಳ ಕೈಗೆ ಸಿಕ್ಕಿಬಿದ್ದಿದ್ದರು.
ಪಾಕ್ ನೆಲದಲ್ಲಿ ಬಂಧಿಯಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಬುಧವಾರ ರಾವಲ್ಪಿಂಡಿಗೆ ಕರೆದೊಯ್ಯಲಾಗಿದ್ದು, ಗುರುವಾರ ಅಲ್ಲಿಂದ ಬಿಗಿಭದ್ರತೆಯೊಂದಿಗೆ ಅವರನ್ನು ವಿಶೇಷ ವಿಮಾನದಲ್ಲಿ ಲಾಹೋರ್ ಗೆ ಕರೆತರಲಾಗಿತ್ತು.