ಮೈಸೂರು,ಮಾ02(AZM):"ನನಗೆ 72 ವರ್ಷ ವಯಸ್ಸಾಗಿದೆ. ನಾನೀಗ ನಿವೃತ್ತಿ ಅಂಚಿನಲ್ಲಿದ್ದೇನೆ. ನನ್ನನ್ನು ಶಾಸಕ,ಮಂತ್ರಿ,ಸಿ.ಎಂ, ಮಾಡಿದ ಜನತೆಗೆ ಧನ್ಯವಾದಗಳು" ಈ ಮಾತನ್ನು ಇದೀಗ ಹೇಳಿರುವುದು ನಮ್ಮ ಮಾಜಿ ಸಿಎಂ ಸಿದ್ಧರಾಮಯ್ಯನವರು. ಇವರ ಈ ಮಾತು ರಾಜಕೀಯದಿಂದ ಇವರು ನಿವೃತ್ತಿ ಹೊಂದಲಿದ್ದಾರೋ ಎನ್ನುವ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಮೈಸೂರಿನ ಕುಪ್ಪೇಗಾಲ ಗ್ರಾಮದಲ್ಲಿ ತಾವು ಪ್ರಾಥಮಿಕ ಶಿಕ್ಷಣ ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತಾಗಿ ಅವರು ಮಾತನಾಡಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮ್ಮನ್ನು ಬೆಳೆಸಿದ ಜನರಿಗೆ ಕೃತಜ್ಞತೆ ಹೇಳಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು, ಈ ಬಾರಿಯ ಲೋಕಸಭೆ ಚುನಾವಣೆಯ ಬಳಿಕ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ಮಾತುಗಳನ್ನು ಕೇಳಿದರೆ ಈ ಬಾರಿಯ ತಮ್ಮ ಶಾಸಕ ಅವಧಿ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಅವರು ರಾಜಕೀಯದಿಂದ ನಿವೃತ್ತಿ ಪಡೆಯಲಿದ್ದಾರಾ ಎಂಬ ಅನುಮಾನ ಶುರುವಾಗಿದೆ.