ನವದೆಹಲಿ,ಮಾ 03 (MSP): ಭಾರತದ ವಾಯುನೆಲೆಯನ್ನು ಉಲ್ಲಂಘಿಸಿ ದೇಶದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್ -16 ವಿಮಾನವನ್ನು ಹೊಡೆದುರುಳಿಸಿದ ಅಭಿನಂದನ್ ಪಾಕಿಸ್ತಾನದಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿದ್ದು, ದೇಶಾದ್ಯಂತ ಅವರಿಗೆ ಅದ್ದೂರಿ ಸ್ವಾಗತ ದೊರಕಿದೆ.
ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಅಭಿನಂದನ್ ಅವರ ಧೈರ್ಯ, ಸಾಹಸವನ್ನು ದೇಶದೆಲ್ಲೆಡೆ ಕೊಂಡಾಡುತ್ತಿದ್ದರೆ, ದೇಶದ ಹಲವೆಡೆ ನವಜಾತ ಶಿಶುಗಳ ಪೋಷಕರು ವಿಂಗ್ ಕಮಾಂಡರ್ ಅಭಿನಂದನ್ ಅವರಂತಹ ಕೆಚ್ಚೆದೆ ಹಾಗೂ ಧೈರ್ಯಶಾಲಿಯಾಗಲಿ ತಮ್ಮ ಮಗು ಆಗಲಿ ಎಂದು ಹಾರೈಸಿ ಶಿಶುಗಳಿಗೆ ಅಭಿನಂದನ್ ಅವರ ಹೆಸರನ್ನು ಇಟ್ಟಿದ್ದಾರೆ.
ಒಂದೆಡೆ ಅಭಿನಂದನ್ ಅವರ ಧೈರ್ಯ,ಸಾಹಸಕ್ಕೆ ದೇಶದ ಜನತೆ ಮೆಚ್ಚಿಕೊಂಡಿದ್ರೆ ಮತ್ತೊಂದೆಡೆ ಅವರಷ್ಟೇ ಪ್ರಸಿದ್ದಿ ಮತ್ತು ಪ್ರಶಂಸೆಯನ್ನು ಅವರ ಮೀಸೆ ಮತ್ತು ಹೇರ್ ಸ್ಟೈಲ್ ಪಡೆದುಕೊಂಡಿದೆ. ಅಭಿನಂದನ್ ದೇಶಕ್ಕೆ ಮರಳುತ್ತಿದ್ದಂತೆ ಅವರ ಮೀಸೆ ಹೊಸ ಟ್ರೆಂಡ್ ಆಗಬಹುದು ಎಂದು ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ ದಕ್ಷಿಣ ಭಾರತದ ಪ್ರಸಿದ್ದ ನಟರಾದ ರಜನಿಕಾಂತ್ , ಕಮಲ್ ಹಾಸನ್ ಅವರ ಈ ರೀತಿಯ ಮೀಸೆ ಹೋಲು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಕಿದ್ದರು.
ಆದರೆ ಇದೀಗ ನೆಟ್ಟಿಗರ ಭವಿಷ್ಯದಂತೆ ಅಭಿನಂದನವರ ಮೀಸೆ, ಹೇರ್ ಸ್ಟೈಲ್ ಟ್ರೆಂಡ್ ಚಾಲ್ತಿಗೆ ಬಂದಿದ್ದು ದೇಶದ ವಿವಿಧ ಭಾಗದಲ್ಲಿ ಯುವಕರು, ಮತ್ತು ಅವರ ಅಭಿಮಾನಿಗಳು ಅಭಿನಂದನ್ ಅವರಂತೆ ಕೇಶ ಹಾಗೂ ಮೀಸೆಯನ್ನು ವಿನ್ಯಾಸ ಮಾಡಿಕೊಳ್ಳುತ್ತಿದ್ದಾರೆ.