ಒಡಿಶಾ,ಮಾ.10(AZM): ಒಡಿಶಾದಲ್ಲಿನ 21 ಲೋಕಸಭಾ ಕ್ಷೇತ್ರಗಳ ಪೈಕಿ ಶೇಕಡಾ 33ರಷ್ಟು ಸ್ಥಾನವನ್ನು ಬಿಜು ಜನತಾ ದಳ ಪಕ್ಷದಿಂದ ಮಹಿಳೆಯರಿಗೆ ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.
ಒಡಿಶಾದಲ್ಲಿ ಇಂದು ನಡೆದ 'ಮಿಷನ್ ಶಕ್ತಿ' ಸಮಾವೇಶದಲ್ಲಿ ನವೀನ್ ಪಟ್ನಾಯಕ್ ಅವರು ಈ ಘೋಷಣೆ ಮಾಡಿದ್ದು, ಇದೇ ಸೂತ್ರವನ್ನು ರಾಜ್ಯದ 147 ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯ ಮಾಡುತ್ತೀರಾ ಎಂಬ ಪ್ರಶ್ನೆಗೆ ಪಟ್ನಾಯಕ್ ಉತ್ತರ ನೀಡಿಲ್ಲ.
ಒಡಿಶಾದಿಂದ ಶೇಕಡಾ 33ರಷ್ಟು ಮಹಿಳೆಯರನ್ನು ಸಂಸತ್ ಗೆ ಕಳುಹಿಸುವ ಕನಸನ್ನು ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಕಂಡಿದ್ದು,ಅವರ ಕನಸನ್ನು ನನಸು ಮಾಡಲು ಮುಂದಾಗಿದ್ದೇನೆ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
ರಾಜ್ಯ ಶಾಸನಸಭೆ ಹಾಗೂ ಸಂಸತ್ ನಲ್ಲಿ 33% ಮೀಸಲಾತಿ ತರುವ ಬಗ್ಗೆ ಕಳೆದ ನವೆಂಬರ್ ನಲ್ಲಿ ಒಡಿಶಾ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಸದ್ಯಕ್ಕೆ ಒಡಿಶಾದಲ್ಲಿ ಹನ್ನೊಂದು ಶಾಸಕಿಯರಿದ್ದರೆ, ಅದರಲ್ಲಿ ಹತ್ತು ಮಹಿಳೆಯರು ಬಿಜೆಡಿಯಿಂದ ಆಯ್ಕೆಯಾಗಿದ್ದಾರೆ. ಒಬ್ಬರು ಬಿಜೆಪಿಗೆ ಆಯ್ಕೆಯಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.