ಬೆಂಗಳೂರು, ಮಾ 11 (MSP): 2019 ರ ಲೋಕಸಭಾ ಚುನಾವಣೆಗೆ, ಚುನಾವಣಾ ಆಯೋಗ ಈಗಾಗಲೇ ದಿನಾಂಕ ಘೋಷಿಸಿದ್ದು ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ 'ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ವೇಳೆ 22 ಸ್ಥಾನದಲ್ಲಿ ಜಯ ದೊರಕಿದರೆ 24 ಗಂಟೆಯೊಳಗೆ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಹೊಸ ಸರ್ಕಾರ ರಚಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ವಿಪಕ್ಷಗಳು ರಚಿಸಿಕೊಂಡಿರುವ ದೋಸ್ತಿ ಸರ್ಕಾರದ ವಿರುದ್ದ ಜನ ರೋಸಿ ಹೋಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಗೊಳಗೆ ಅಧಿಕಾರಕ್ಕಾಗಿ ಕಚ್ಚಾಡುತ್ತಿದೆ. ಈ ಬಾರಿಯ ಲೋಕ ಸಮರದಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಆ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದರು.
ಮೈತ್ರಿ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಅಮೆಗತಿಯನ್ನು ಪಡೆದುಕೊಂಡಿದೆ. ವರ್ಗಾವಣೆಯ ವ್ಯವಹಾರವನ್ನು ದಂಧೆಯಾಗಿ ಮಾಡಿಕೊಂಡಿದೆ. ಭ್ರಷ್ಟಾಚಾರದಲ್ಲಿ ಮೈಮರೆತಿದೆ. ಹೀಗಾಗಿ ಜನರು ಮೈತ್ರಿ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕು ಎಂದರು.