ಬೆಂಗಳೂರು,ಮಾ 11 (MSP):ದೇಶದಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿದ್ದು, ಬಿರುಸಿನ ಚಟುವಟಿಕೆ ಆರಂಭವಾಗಿದೆ. ಲೋಕ ಸಮರಕ್ಕಾಗಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಇನ್ನೇನು ಹೊರಬೀಳಲಿದೆ.
ಈ ನಡುವೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದತ್ತ ರಾಷ್ಟ್ರೀಯ ಘಟಾನುಘಟಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ಚಿತ್ತ ನೆಟ್ಟಿದೆ. ಸಂಸದ ಅನಂತ್ ಕುಮಾರ್ ಅವರು ವಿಧಿವಶರಾದ ಬಳಿಕ ಸಮರ್ಥ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಬೇಕು ಎಂದು ಬಿಜೆಪಿ ರಣತಂತ್ರ ರೂಪಿಸುತ್ತಿದ್ದರೆ ಇತ್ತ 1996ರ ಬಳಿಕ ಕೈ ತಪ್ಪಿ ಹೋದ ಕ್ಷೇತ್ರಕ್ಕಾಗಿ ಕಾಂಗ್ರೆಸ್ ಪಕ್ಷ, ಬಿಜೆಪಿಗೆ ಠಕ್ಕರ್ ನೀಡಲು ಸಿದ್ದತೆ ನಡೆಸಿಕೊಂಡಿದೆ.
1996ರಿಂದ 2014ರವರೆಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಟ್ಟ ಅನಂತ್ ಕುಮಾರ್ ಅವರು ವಿಧಿವಶರಾದ ಬಳಿಕ ಅವರ ಪತ್ನಿ ಡಾ.ತೇಜಸ್ವಿನಿ ಅನಂತ್ ಕುಮಾರ್ ಅವರೇ ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ತೀರ್ಮಾನಿಸಿದ್ದು, ಈ ಬಗ್ಗೆ ಬಿಜೆಪಿ ಸೋಮವಾರ ಸಂಜೆ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಇನ್ನು ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿರುವ ಕಾಂಗ್ರೆಸ್, ಒಂದು ವೇಳೆ ಬಿಜೆಪಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಕ್ಷದಿಂದಲೂ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ತಯಾರಿ ಮಾಡಿಕೊಂಡಂತಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದೆ. ಒಟ್ಟಾರೆ ಎರಡು ಪಕ್ಷದಿಂದಲೂ ಅಧಿಕೃತವಾಗಿ ಅಭ್ಯರ್ಥಿಯನ್ನು ಘೋಷಿಸುವುದಷ್ಟೇ ಬಾಕಿ ಇದೆ.