ವಿಜಯಪುರ,ಮಾ 12 (MSP): ವರನು ವಧುವಿನೊಂದಿಗೆ ಸಪ್ತಪದಿ ತುಳಿದು ಶಾಸ್ತ್ರಗಳನ್ನು ನೆರವೇರಿಸಿ ಬಳಿಕ ವಧುವಿನ ಕೊರಳಿಗೆ ಮಾಂಗಲ್ಯ ಧಾರಣೆ ಮಾಡೋದು ಸಾಮಾನ್ಯ ಸಂಪ್ರದಾಯ. ಆದ್ರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಹಳ್ಳೂರ ಪ್ಯಾಲೇಸ್ನಲ್ಲಿ ಮಾತ್ರ ವಿವಾಹ ಸಮಾರಂಭವೊಂದು ಸ್ವಲ್ಪ ಭಿನ್ನವಾಗಿ ನಡೆದಿತ್ತು. ಯಾಕೆಂದರೆ ಇಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ವಿವಾಹ ನಡೆದಿತ್ತು.
ಇಲ್ಲಿನ ದುದ್ದಗಿ, ಬರಗುಂಡಿ ಮನೆತನದಿಂದ ಹಮ್ಮಿಕೊಂಡ ಕಲ್ಯಾಣ ಮಹೋತ್ಸವದಲ್ಲಿ ವರ ಪ್ರಭುರಾಜಗೆ ವಧು ಅಂಕಿತಾ ಹಾಗೂ ವರ ಅಮಿತಗೆ ವಧು ಪ್ರಿಯಾ ಅವರು ಮಾಂಗಲ್ಯ ಧಾರಣೆ ಮಾಡಿ ವಿಶಿಷ್ಟ ರೀತಿಯಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟರು.
ಮದುಮಗಳು, ತಾಳಿಯೊಂದಿಗೆ ರುದ್ರಾಕ್ಷಿ ಪೋಣಿಸಿದ ತಾಳಿಯನ್ನು ಮದುಮಗನಿಗೆ ಕಟ್ಟುವ ಮೂಲಕ ಬಸವಣ್ಣದ ಕಲ್ಯಾಣ ಕ್ರಾಂತಿಯನ್ನು ಆಚರಿಸಿದರು. ಈ ವಿವಾಹ ಬಸವ ಧರ್ಮದ ತತ್ವದ ಅಡಿಯಲ್ಲಿ ನಡೆದಿದ್ದು, ಶುಭ ಮುಹೂರ್ತವಿಲ್ಲದೆ ವಿವಾಹ ನಡೆದಿದ್ದು ಮತ್ತೊಂದು ವಿಶೇಷ. ವಿವಾಹ ಸಮಾರಂಭಕ್ಕೆ ಬಂದಿದ್ದ ಅಥಿತಿಗಳು ವಧು-ವರರಿಗೆ ಅಕ್ಷತೆ ಬದಲು ಪುಷ್ಪವೃಷ್ಟಿ ಹಾಕಿ ಆಶೀರ್ವಾದ ಮಾಡಿದರು.