ಮಡಿಕೇರಿ,ಮಾ 12 (MSP): ಪರೀಕ್ಷೆಯ ಫಲಿತಾಂಶಕ್ಕೆ ಭಯಪಟ್ಟ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊಸಕೇರಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು 14 ವರ್ಷದ ಜಸ್ಮಿತಾ ಎಂದು ಗುರುತಿಸಲಾಗಿದೆ. ಈಕೆ 9ನೇ ತರಗತಿ ಓದುತ್ತಿದ್ದು, ಮಾ.11ರ ಸೋಮವಾರ ಗಣಿತ ಪರೀಕ್ಷೆ ಬರೆದು ಮನೆಗೆ ಬಂದಿದ್ದಳು. ಬಳಿಕ ಮನೆ ಡೆತ್ ನೋಟ್ ಬರೆದು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಪ್ಪ-ಅಮ್ಮ ನೀವು ನನ್ನನ್ನು ಉತ್ತಮವಾಗಿ ಓದಿಸಿ ನಾನು ಮುಂದೆ ಬರಬೇಕು ಎಂದು ಬಯಸಿದ್ದೀರಿ. ನನಗೂ ಓದಬೇಕು ಎನ್ನುವ ಮನಸ್ಸಿತ್ತು. ಆದರೂ ನನ್ನ ಮನಸ್ಸೆಲ್ಲಾ ಆಟದ ಕಡೆಗೆ ಇತ್ತು. ಆದರೆ ನನಗೆ ಈಗ ದೊಡ್ಡ ತಪ್ಪು ಮಾಡಿದೆ ಅನ್ನಿಸುತ್ತಿದೆ. ಎಲ್ಲಿಯಾದರೂ ಹೋಗಬೇಕೆಂದು ತೀರ್ಮಾನ ಮಾಡಿದ್ದೇನೆ. ನನಗೆ ರಮ್ಯನ ಮದುವೆ ನೋಡಬೇಕು ಎನ್ನುವ ಆಸೆ ಇತ್ತು. ನೀವು ನನ್ನ ಚಂದವಾಗಿ ಬೆಳೆಸಿದ್ದೀರಿ. ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದ್ದೀರಿ. ಆದರೆ ನನಗೆ ಓದುವುದಕ್ಕೆ ಆಗಲಿಲ್ಲ.
ಅಮ್ಮ- ಅಪ್ಪ ನೀವೆಂದರೆ ನನಗೆ ಪ್ರಾಣ. ನಾನು ಎಲ್ಲರನ್ನು ಇಷ್ಟಪಡುತ್ತೇನೆ. ನಾನು 9ನೇ ತರಗತಿ ಉತ್ತೀರ್ಣ ಆಗುವುದಿಲ್ಲ ಎಂದು ನನಗೆ ಗೊತ್ತಿತ್ತು. ನಾನು ನಿಮಗೆ ಕೆಟ್ಟ ಹೆಸರು ತರುತ್ತಿದ್ದೇನೆ ಎಂದು ಅನ್ನಿಸುತ್ತದೆ.ಐ ಲವ್ ಯೂ ಅಮ್ಮ- ಅಪ್ಪ. ನನ್ನಿಂದಾಗಿ ನಮ್ಮ ಮೂರು ಜನರ ಮಾನ ಮಾರ್ಯದೆ ಹೋಯಿತು. ಅದಕ್ಕೆ ನಾನು ಈ ರೀತಿ ತೀರ್ಮಾನ ಮಾಡಿದೆ. ಅಣ್ಣ- ಅಕ್ಕಂದಿರೆ,ನೀವೆಲ್ಲಾ ನನಗೆ ತುಂಬಾ ಇಷ್ಟ. ಬಾವ ಪವನಾ, ಜೀವನ್ ತುಂಬಾ ಇಷ್ಟ. ರಮ್ಯಾ ನಿನ್ನ ಮದುವೆ ಚೆನ್ನಾಗಿ ನಡೆಯಬೇಕು. ಎಲ್ಲರನ್ನು ತುಂಬಾ ನೆನಪಿಸಿಕೊಳ್ಳುತ್ತೀನಿ ಎಂದು ಬಾಲಕಿ ಡೆತ್ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.