ಉತ್ತರ ಪ್ರದೇಶ,ಮಾರ್ಚ್ 12(AZM): ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರ ಮಾಜಿ ಕಾರ್ಯದರ್ಶಿ ನೇತ್ರಮ್ ಅವರಿಗೆ ಸೇರಿದ 12 ಸ್ಥಳಗಳಲ್ಲಿ ಆದಾಯ ತೆರಿಗೆಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. 100 ಕೋಟಿ ರುಪಾಯಿಯಷ್ಟು ತೆರಿಗೆ ವಂಚನೆ ಮಾಡಿದ ಗುಮಾನಿ ಮೇಲೆ ಈ ದಾಳಿ ನಡೆದಿದ್ದು, ಇಂದು ಸಂಜೆಯ ನಂತರವೂ ದಾಳಿ ಮುಂದುವರಿಯುವ ಸಾಧ್ಯತೆ ಇದೆ.
ಆದಾಯ ತೆರಿಗೆಯ ಅಧಿಕಾರಿಗಳು ದೆಹಲಿ ಹಾಗೂ ಲಖನೌದ 12 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ನಿವೃತ್ತ ಐಎ ಎಸ್ ಅಧಿಕಾರಿಯಾಗಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರ ಮಾಜಿ ಕಾರ್ಯದರ್ಶಿ ನೇತ್ರಮ್ ಅವರು ನೂರಾರು ಕೋಟಿ ರೂ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. 2007 ರಿಂದ 12ರ ಮಧ್ಯೆ ಉತ್ತರಪ್ರದೇಶದಲ್ಲಿ ಮಾಯಾವತಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನೇತ್ರಮ್ ಅವರು ಆಪ್ತರಾಗಿದ್ದರು. ಐದು ವರ್ಷಗಳ ಕಾಲ ಮುಖ್ಯಮಂತ್ರಿ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದರು. ದಲಿತ ಸಮುದಾಯಕ್ಕೆ ಸೇರಿದ ಅವರು, ಕೃಷಿ ಇಲಾಖೆ, ಅಬಕಾರಿ, ಕಬ್ಬು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳಲ್ಲಿ ಮುಖ್ಯ ಹುದ್ದೆಗಳನ್ನು ವಹಿಸಿದ್ದರು.
ಆ ನಂತರ 2012ರಲ್ಲಿ ಅಖಿಲೇಶ್ ಯಾದವ್ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ನಂತರ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಹುದ್ದೆಗೆ ನೇಮಕವಾದರು. 2014ರಲ್ಲಿ ಅವರು ಸೇವೆಯಿಂದ ನಿವೃತ್ತರಾದರು. ಕಳೆದ ಜನವರಿ ಆರಂಭದಲ್ಲಿ ಉತ್ತರಪ್ರದೇಶದಲ್ಲಿ ಸ್ಥಾಪಿಸಲಾದ ಆನೆ ಪುತ್ಥಳಿ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು. ಈ ಸಂಬಂಧ ಲಖನೌದಲ್ಲಿ ಆರು ಸ್ಥಳಗಳಲ್ಲಿ ದಾಳಿ ಕೂಡ ನಡೆದಿತ್ತು.
ಇದೀಗ ನೇತ್ರಮ್ ಮೇಲಿನ ಈ ದಾಳಿಯು ಅಕ್ರಮ ಗಣಿ ಹಗರಣದ ಆರೋಪದಲ್ಲಿ ಅಖಿಲೇಶ್ ಯಾದವ್ ಪಾತ್ರದ ಬಗ್ಗೆ ಸಿಬಿಐ ತನಿಖೆ ಆರಂಭಿಸಿದ ಕೆಲ ವಾರಗಳಲ್ಲೇ ಆಗಿದೆ. ಇದೀಗ ಲೋಕಸಭೆ ಚುನಾವಣೆಗೆ ಅಖಿಲೇಶ್ ಹಾಗೂ ಮಾಯಾವತಿ ಅವರ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಈಗ, ಬಿಜೆಪಿ ಬೇಕೆಂತಲೇ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.