ಮಂಡ್ಯ,ಮಾ.೧೨,(AZM): ಜ್ಯೋತಿಷಿಗಳಿಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಬಿಸಿ ತಟ್ಟಲಿದ್ದು, ಅಶೋಕ ನಗರದಲ್ಲಿರುವ ಜೋತಿಷ್ಯ ಮಂದಿರದ ಬೋರ್ಡ್ ನಲ್ಲಿ ಹಸ್ತ ಚಿಹ್ನೆ ಇದ್ದ ಹಿನ್ನಲೆ ಚುನಾವಣಾಧಿಕಾರಿಗಳು ಬೋರ್ಡ್ ಗೆ ಪೇಪರ್ ಹಚ್ಚಿ ಮುಚ್ಚಿರುವ ಘಟನೆ ನಡೆದಿದೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆ ಮಾ.10ರಂದು ಭಾನುವಾರ ನೀತಿ ಸಂಹಿತೆ ಜಾರಿಯಾಗಿದ್ದು, ಜ್ಯೋತಿಷ್ಯ ಮಂದಿರಗಳ ಬೋರ್ಡ್ ಗೂ ಕೂಡಾ ಈ ಬಿಸಿ ತಟ್ಟಿದೆ. ಹಲವು ಜ್ಯೋತಿಷ್ಯ ಕೇಂದ್ರಗಳಲ್ಲಿ ನಿಮ್ಮ ಹಸ್ತವನ್ನು ನೋಡಿ ಜ್ಯೋತಿಷ್ಯ ಹೇಳುತ್ತೇವೆ ಎಂದು ಜ್ಯೋತಿಷಿಗಳು ಹಸ್ತದ ಚಿಹ್ನೆ ಇರುವ ಬೋರ್ಡ್ ಗಳನ್ನು ಹಾಕಿರುತ್ತಾರೆ. ಆದ್ರೆ ಈ ಹಸ್ತ ಕಾಂಗ್ರೆಸ್ ಪಕ್ಷದ ಚಿಹ್ನೆ ಕೂಡ ಆಗಿರುವುದರಿಂದ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.
ಸದ್ಯ ಜಾರಿಯಲ್ಲಿರುವ ನೀತಿ ಸಂಹಿತೆ ಅವಧಿ ಮುಗಿಯುವವರೆಗೂ ಜ್ಯೋತಿಷಿ ಕೇಂದ್ರದ ಮುಂದೆ ಹಸ್ತ ಚಿಹ್ನೆ ಇರುವ ಬೋರ್ಡ್ ಹಾಕಬಾರದು ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.