ಬೆಂಗಳೂರು ,ಮಾ 13(MSP): ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಆನಂದ ಸಿಂಗ್ ವಿರುದ್ದ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿನ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರೆಂಟ್ ಹೊರಡಿಸಿದೆ.
ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟ ಪ್ರಮುಖ ಆರೋಪಿಗಳಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅಲಿಖಾನ್, ನಾಗೇಂದ್ರ ಹಾಗೂ ಸುರೇಶ್ ಬಾಬು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ಮಾತ್ರ ಹಾಜರಾಗಿರಲಿಲ್ಲ. ಪ್ರಕರಣದ ವಿಚಾರಣೆ ಸಂದರ್ಭ ಶಾಸಕ ಆನಂದ ಸಿಂಗ್ ಅವರಿಗೆ ವಿನಾಯಿತಿ ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.
"ಇತ್ತೀಚೆಗೆ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ ಗಣೇಶ ಅವರು ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆಯಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಅವರಿಗೆ ಹಲವು ತಿಂಗಳ ಚಿಕಿತ್ಸೆ ಅಗತ್ಯವಿದೆ. ಅವರು ಆಸ್ಪತ್ರೆಯಿಂದ ಇನ್ನು ಬಿಡುಗಡೆ ಹೊಂದಿಲ್ಲ" ಎಂದು ಆನಂದ್ ಸಿಂಗ್ ಅವರ ಚಿಕಿತ್ಸೆಯ ವೈದ್ಯಕೀಯ ದಾಖಲೆಗಳನ್ನು ನೀಡಿ ವಿನಾಯಿತಿ ನೀಡುವಂತೆ ನ್ಯಾಯಾಧೀಶರನ್ನು ವಿನಂತಿಸಿಕೊಂಡರು. ಈ ವೇಳೆ ಅಸಮಾಧಾನಗೊಂಡ ನ್ಯಾಯಾಧೀಶರು, ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಯುವ ಮೊದಲೇ ನಡೆದ ಹಲವು ವಿಚಾರಣೆಗೆ ಗೈರು ಹಾಜರಾಗಲು ಕಾರಣವೇನು ? " ಎಂದು ಕಿಡಿ ಕಾರಿದರು. ನಂತರ ಆರೋಪಿ ಶಾಸಕ ಆನಂದ್ ಸಿಂಗ್ ವಿರುದ್ದ ಜಾಮೀನು ರಹಿತ ಬಂಧನದ ವಾರಂಟ್ ಗೆ ಆದೇಶಿಸಿದರು.