ಬೆಂಗಳೂರು,ಮಾ೧೩(AZM):ಎ ಐ ಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆಯವರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪರವಾಗಿ ದೂರು ನೀಡಲಾಗಿದ್ದು, ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಹಾಗೂ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕೆಂದು ಒತ್ತಾಯಿಸಲಾಗಿದೆ.
ಮಾ.10ರ ಭಾನುವಾರ ಭಟ್ಕಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅನಂತ ಕುಮಾರ್ ಹೆಗಡೆ 'ಇಡೀ ಜಗತ್ತು ಏರ್ ಸ್ಟ್ರೈಕ್ ನಡೆದಿರುವುದನ್ನ ಒಪ್ಪಿಕೊಂಡಿದೆ. ಆದರೆ, ಕೆಲವರಿಗೆ ಸಾಕ್ಷ್ಯ ಕೊಡಬೇಕಂತೆ. ನಮ್ಮ ಸೈನಿಕರು ಪಾಕಿಸ್ತಾನದಲ್ಲಿ ಹೋಗಿ ಉಗ್ರರನ್ನ ಹೊಡೆದಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಆದರೆ, ಮುಸಲ್ಮಾನನ ಮಗ ಗಾಂಧಿ ಹೇಗಾದ ಅನ್ನೋದಕ್ಕೆ ಸಾಕ್ಷಿ ಕೊಡುತ್ತಾರಾ?' ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಇಂದು ದೂರು ನೀಡಲಾಗಿದೆ.