ನವದೆಹಲಿ,ಮಾ13(AZM):ಭಾರತದ ವೀರಯೋಧರ ಕಾರ್ಯಾಚರಣೆಯನ್ನು ಮೋದಿ ಸರಕಾರ ರಾಜಕೀಯಗೊಳಿಸುತ್ತಿದೆ ಎಂದು, ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದು, ಕಾಂಗ್ರೆಸ್ ಸರಕಾರದ ಆಡಳಿತದ ವೇಳೆ 15 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಆದರೆ, ಮೋದಿ ಸರಕಾರ ಗಾಂಧಿ ಕುಟುಂಬವನ್ನು ಟೀಕಿಸುವ ಕೆಲಸದಲ್ಲಿ ತೊಡಗಿದೆ ಎಂದರು.
''ದೇಶವಾಸಿಗಳು ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ನೆನೆಸಿದ್ದಾರೆ. ಆದರೆ, ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 15 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಆದರೆ, ಇದನ್ನು ಮೋದಿ ಸರಕಾರ ಎಂದೂ ಹೇಳಿಲ್ಲ'' ಎಂದು ರಾಜಸ್ತಾನದ ಮುಖ್ಯಮಂತ್ರಿ ಗೆಹ್ಲೋಟ್ ಅವರು ಹೇಳಿದರು.
''ಮೋದಿ ಪ್ರಧಾನಿಯಾದ ಬಳಿಕ ಇಸ್ರೋ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು. ಆದರೆ, ಇದನ್ನು ಮೋದಿ ಅವರ ಆಡಳಿತದ ಅವಧಿಯಲ್ಲಿ ಮಾತ್ರ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು ಎಂದು ಪ್ರತಿಬಿಂಬಿಸಲಾಯಿತು. ವರ್ಷಗಳ ಹಿಂದೆ ಇಂದಿರಾ ಗಾಂಧಿ ಇಸ್ರೋವನ್ನು ರೂಪಿಸಿದ ಬಳಿಕ ನೂರಾರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ.'' ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಅದರ ಪರಂಪರೆಯನ್ನು ನಾಶಗೊಳಿಸುವ ಅಭಿಯಾನಕ್ಕೆ ಬಿಜೆಪಿ ಹಾಗೂ ಆರ್ಎಸ್ಎಸ್ ನೂರಾರು ಕೋಟಿ ರೂಪಾಯಿ ವ್ಯಯಿಸುತ್ತಿದೆ ಎಂದು ಗೆಹ್ಲೋಟ್ ಹೇಳಿದರು.