ಬೆಂಗಳೂರು,ಮಾ 14 (MSP): ಕೂಡಲ ಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ (75) ಮಾ.14 ರ ಗುರುವಾರ ಲಿಂಗೈಕ್ಯರಾಗಿದ್ದಾರೆ.
ಮಧುಮೇಹ, ಮೂತ್ರಪಿಂಡದ ಸಮಸ್ಯೆ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಜಗದ್ಗುರು ಮಾತೆ ಮಹಾದೇವಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತೀವ್ರ ಅಸ್ವಸ್ಥರಾದ ಅವರನ್ನು ಮಾ.8 ರ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರದಿಂದಲೇ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಮಾತೆಯವರಿಗೆ ನಿರಂತರವಾಗಿ ಆ್ಯಂಟಿ ಬಯೋಟಿಕ್ಸ್ ಔಷಧ ಪೂರೈಸಲಾಗುತ್ತಿತ್ತು.
ಮಾತೆ ಮಹಾದೇವಿ ಅವರ ವಿಧಿವಶರಾದ ಸುದ್ದಿ ಹರಡುತ್ತಿದ್ದಂತೆ ಅವರು ಚಿಕಿತ್ಸೆ ಪಡೆಯುತ್ತಿದ್ದ ಮಣಿಪಾಲ್ ಆಸ್ಪತ್ರೆ ಬಳಿ ಸಾವಿರಾರು ಭಕ್ತರು ಜಮಾಯಿಸಿದ್ದಾರೆ. ಗುರು ಲಿಂಗಾನಂದರವರಿಂದ ಪ್ರಭಾವಕ್ಕೆ ಒಳಗಾದ ಅವರು, ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, “ಪ್ರಥಮ ಮಹಿಳಾ ಜಗದ್ಗುರು” ಎಂದು ತಮ್ಮ ಭಕ್ತರಿಂದ ಗುರುತಿಸಿಕೊಂಡಿದ್ದ ಮಾತೆ ಮಹಾದೇವಿ ಅವರು ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದರು.