ನವದೆಹಲಿ,ಮಾ 14 (MSP): ಕಾಂಗ್ರೆಸ್ ನ ಹಿರಿಯ ನಾಯಕ ,ಸೋನಿಯಾ ಗಾಂಧಿ ಅವರ ನಿಕಟವರ್ತಿ ಟಾಮ್ ವಡಕ್ಕನ್ ಅವರು ಮಾ.14ರ ಗುರುವಾರ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಡಕ್ಕನ್, ಬಾಲಕೋಟ್ ಉಗ್ರ ಶಿಬಿರಗಳ ಮೇಲಿನ ಭಾರತೀಯ ವಾಯುಪಡೆಯ ನಡೆಸಿದ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್ ನಡೆಯಿಂದ ನನಗೆ ತೀವ್ರ ಬೇಸರವಾಗಿದೆ ಎಂದು ಹೇಳಿದರು.
ನಾನು ೨೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದು, ಇದೀಗ ನೊಂದ ಹೃದಯದಿಂದ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದೇನೆ. ಕಾಂಗ್ರೆಸ್ ಪಕ್ಷ ಸಿದ್ದಾಂತಗಳನ್ನು ಬದಿಗಿರಿಸಿ ಕುಟುಂಬ ರಾಜಕಾರಣದತ್ತ ಒಲವು ತೋರುತ್ತಿದೆ. ಮಾತ್ರವಲ್ಲದೆ ಪಕ್ಷಗಾಗಿ ದುಡಿದವರನ್ನು ಅಗತ್ಯವಿದ್ದಾಗ ಬಳಸಿಕೊಂಡು ಬಳಿಕ ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.
ಟಾಮ್ ವಡಕ್ಕನ್ ಚುನಾವಣೆಗೆ ಸ್ಪರ್ಧಿಸದಿದ್ದರೂ, ಕಾಂಗ್ರೆಸ್ ನ ಪ್ರಮುಖ ಮುಖಂಡರಾಗಿದ್ದರು. ಮಾತ್ರವಲ್ಲದೆ ಸೋನಿಯಾ ಗಾಂಧಿ ಅವರ ನಿಕಟವರ್ತಿಯಾಗಿದ್ದ ಅವರು ಸೋನಿಯ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅವರು ಪ್ರಶಂಸಿಸಿದರು.