ಬೆಂಗಳೂರು, ಮಾ 14(SM): ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ದೇಶದೆಲ್ಲೆಡೆ ನೀತಿ ಸಂಹಿತೆ ಕೂಡ ಜಾರಿಗೆ ಬಂದಿದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗದು ಸಾಗಾಟದ ಮೇಲೆ ಆಯೋಗ ಹದ್ದಿನ ಕಣ್ಣಿರಿಸಿದೆ. ಕೇವಲ 50 ಸಾವಿರ ತನಕ ನಗದು ಸಾಗಾಟ ಮಾಡಲು ಮಾತ್ರ ಸಾರ್ವಜನಿಕರಿಗೆ ಅವಕಾಶ ಇರಲಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಒಂದೊಮ್ಮೆ ಐವತ್ತು ಸಾವಿರಕ್ಕಿಂತಲೂ ಅಧಿಕ ನಗದು ಹಣ ಸಾಗಿಸುವುದೇ ಆದಲ್ಲಿ ಅಂತಹ ಸಂದರ್ಭದಲ್ಲಿ ಸೂಕ್ತ ದಾಖಲೆಗಳ ಅಗತ್ಯವಿರುತ್ತದೆ. ಸೂಕ್ತ ದಾಖಲೆ ಪತ್ರಗಳೊಂದಿಗೆ ಹಣ ಸಾಗಾಟ ಮಾಡಬಹುದೆಂದ ಅವರು, ಬ್ಯಾಂಕ್ ಗಳು ಕೂಡ ನಗದು ರವಾನಿಸುವಂತಹ ಸಂದರ್ಭದಲ್ಲಿ ಕಾನೂನನ್ನು ಪಾಲಿಸಬೇಕೆಂದರು. 10 ಸಾವಿರ ರೂಪಾಯಿಗಿಂತಲೂ ಅಧಿಕ ಮೌಲ್ಯದ ಗಿಫ್ಟ್ ಗಳನ್ನು ಸಾಗಿಸುವಂತಹ ಸಂದರ್ಭದಲ್ಲೂ ದಾಖಲೆ ಅಗತ್ಯವಾಗಿ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಮದುವೆ, ಹುಟ್ಟು ಹಬ್ಬ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಚುನಾವಣಾ ಅಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.