ಕಾಸರಗೋಡು, ಮಾ 14(SM): ಪೆರಿಯದಲ್ಲಿ ಕೊಲೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ರ ಪೆರಿಯ ಕಲ್ಯೊಟ್ ನಲ್ಲಿರುವ ಮನೆಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಭೇಟಿ ನೀಡಿದರು. ಹಾಗೂ ಮನೆ ಮಂದಿಗೆ ಸಾಂತ್ವನ ತುಂಬಿದರು.
ಕಣ್ಣೂರಿನಿಂದ ಹೆಲಿಕಾಪ್ಟರ್ ಮೂಲಕ ಪೆರಿಯ ಕೇಂದ್ರ ವಿದ್ಯಾಲಯದ ಹೆಲಿಪ್ಯಾಡ್ ನಲ್ಲಿ ಬಂದಿಳಿದ ರಾಹುಲ್ ಗಾಂಧಿ ಯವರು ಕಲ್ಯೊಟ್ ನಲ್ಲಿರುವ ಕೃಪೇಶ್ ರ ಮನೆಗೆ ಭೇಟಿ ನೀಡಿದರು. ಕೃಪೇಶ್ ರವರ ಗುಡಿಸಲು ಮನೆಯನ್ನು ಕಂಡು ರಾಹುಲ್ ಗಾಂಧಿ ಮರುಗಿದರು. ಹತ್ತು ನಿಮಿಷಕ್ಕೂ ಅಧಿಕ ಸಮಯ ಕೃಪೇಶ್ ರ ಮನೆಯಲ್ಲಿ ಕಳೆದ ರಾಹುಲ್ ಗಾಂಧಿ ಕುಟುಂಬದವರಿಗೆ ಧೈರ್ಯ ತುಂಬಿದರು. ಇದೇ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಕೃಪೇಶ್ ಮತ್ತು ಶರತ್ ಲಾಲ್ ರ ಕುಟುಂಬಕ್ಕೆ ನ್ಯಾಯ ಸಿಗುವ ತನಕ ಹೋರಾಟ ನಡೆಸುವುದಾಗಿ ಹೇಳಿದರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ತನಕ ಹೋರಾಟ ನಡೆಸಬೇಕಿದ್ದು, ಸಂಪೂರ್ಣ ಬೆಂಬಲ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದರು.
ಬಳಿಕ ಶರತ್ ಲಾಲ್ ರ ಮನೆಗೆ ಭೇಟಿ ನೀಡಿದರು. ಹತ್ತು ನಿಮಿಷಗಳ ಕಾಲ ಕುಟುಂಬಸ್ಥರೊಂದಿಗೆ ಕಳೆದ ರಾಹುಲ್ ಗಾಂಧಿಯವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಕಳೆದ ಆಗಸ್ಟ್ ನಲ್ಲಿ ಕಣ್ಣೂರು ಮಟ್ಟನ್ನೂರಿನಲ್ಲಿ ಕೊಲೆ ಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತ ಶುಹೈಬ್ ನ ಕುಟುಂಬಸ್ಥರನ್ನು ಭೇಟಿ ಯಾದರು. ಪೆರಿಯಕ್ಕೆ ಭೇಟಿ ಬಳಿಕ ರಾಹುಲ್ ಗಾಂಧಿಯವರು ಹೆಲಿಕಾಪ್ಟರ್ ನಲ್ಲಿ ಕೋಜಿಕ್ಕೋಡ್ ಗೆ ತೆರಳಿದರು.
ಇನ್ನು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್ ಮೊದಲಾದ ಮುಖಂಡರು ರಾಹುಲ್ ಗಾಂಧಿ ಜೊತೆಗಿದ್ದರು.