ಬೆಂಗಳೂರು,ಮಾ 15 (MSP): ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರನ್ನು ಘೋಷಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ತೀವ್ರ ಬೇಸರವಾಗಿದ್ದು, ಈ ಅವಕಾಶವನ್ನು ತನ್ನ ಗೆಲುವಿನ ಅಸ್ತ್ರವನ್ನಾಗಿಸಲು ಬಿಜೆಪಿ ತೀರ್ಮಾನಿಸಿದೆ.
ಅತ್ತ ಕಡೆ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ಸ್ಪಷ್ಟವಾಗುತ್ತಿದ್ದಂತೆ, ಬಿಜೆಪಿ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದು ಇದಕ್ಕೆ ಬಿಜೆಪಿ ಹೈಕಮಾಂಡ್ ಕೂಡಾ ಸ್ಪಷ್ಟನೆ ನೀಡಿದೆ.
ಈ ಬೆಳವಣಿಗೆಯ ಮಧ್ಯೆ ಸುಮಲತಾ ಅಂಬರೀಶ್ ಅವರು ಹಿರಿಯ ರಾಜಕೀಯ ಧುರೀಣ, ಬಿಜೆಪಿ ನಾಯಕ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನು ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, "ಕೃಷ್ಣ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಬಂದಿದ್ದೇನೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನನ್ನ ಮನಸ್ಸಿಗೆ ಕೊಂಚ ಸಮಾಧಾನ ತಂದಿದೆ. ಸದ್ಯದ ಮಂಡ್ಯದ ಆಗುಹೋಗುಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ. ಮಾ. 18 ರ ಬಳಿಕ ಪಕ್ಷೇತರವಾಗಿ ಸ್ಪರ್ಧಿಸಬೇಕೋ ಅಥವಾ ಪಕ್ಷಕ್ಕೆ ಸೇರ್ಪಡೆಗೊಂಡು ಸ್ಪರ್ಧಿಸಬೇಕೋ ಎಂದು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ" ಎಂದು ತಿಳಿಸಿದರು.