ಮೈಸೂರು,ಮಾ 15 (MSP): ಭಾರತೀಯ ಜನತಾ ಪಕ್ಷವೂ ಉಗ್ರರ ವಿರುದ್ದ ಒಂದೋ, ಎರಡೋ ಸರ್ಜಿಕಲ್ ಸ್ಟ್ರೈಕ್ ಮಾಡಿ ಬೀಗುತ್ತಿದ್ದಾರೆ. ಮಾತ್ರವಲ್ಲದೇ ತಾವೇ ಸರ್ಜಿಕಲ್ ಸ್ಟ್ರೈಕ್ ನ್ನು ಮಾಡಿದಂತೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ನಮ್ಮ ಆಡಳಿತ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆವು. ಆದರೆ ಈ ಬಗ್ಗೆ ನಮಗೆ ಪ್ರಚಾರ ಆಗತ್ಯವಿರಲಿಲ್ಲ. ಯುಪಿಎ ಅವಧಿಯಲ್ಲಿ ಎರಡು ಮೂರಲ್ಲ ಸುಮಾರು 12-13 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಮಾಡಿದ ವಿಚಾರವನ್ನು ನಾವು ಯಾವತ್ತು ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ. ಆದರೆ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಮಾಜಿ ಪ್ರಧಾನಿ, ದಿ.ಇಂದಿರಾ ಗಾಂಧಿ ಸರ್ಕಾರದ ಅವಧಿಯ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ತಿಳಿದಿಲ್ಲವೇ? ಅದಕ್ಕಿಂತಲೂ ದೊಡ್ಡದಾಗಿ ಈ ಸರ್ಜಿಕಲ್ ಸ್ಟ್ರೈಕ್ ಕಾಣಿಸುತ್ತಿದೆಯಾ ? ಕಾಂಗ್ರೆಸ್ ಪಕ್ಷ ದೇಶದ ರಕ್ಷಣೆ ವಿಚಾರವನ್ನು ಎಂದೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಬಿಜೆಪಿಯೂ ಎಂದಿಗೂ ಅಭಿವೃದ್ಧಿ ವಿಚಾರದಲ್ಲಿ ಮತ ಕೇಳಿಲ್ಲ, ರೈತರ ವಿಚಾರವನ್ನು ಮುಂದಿಟ್ಟುಕೊಂಡು ಮತ ಯಾಚಿಸಿಲ್ಲ. ಯಾಕೆಂದರೆ ಅವರಿಗೆ ಅಭಿವೃದ್ದಿ ಬೇಕಿಲ್ಲ. ಭಾವನಾತ್ಮಕ ವಿಚಾರಗಳನ್ನು ದಾಳವಾಗಿ ಬಳಸಿ ಮತ ಗಳಿಸೋದು ಬಿಜೆಪಿ ತಂತ್ರ ಎಂದು ಅಕ್ರೋಶ ವ್ಯಕ್ತಪಡಿಸಿದರು.