ನವದೆಹಲಿ, ಮಾ 15(SM): ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಿದೆ ಎನ್ನಲಾಗಿದೆ. ಬಿಜೆಪಿ ವಿರುದ್ಧ ಗೆಲ್ಲಲು ಎಲ್ಲೆಲ್ಲೂ ಮೈತ್ರಿ ಸೂತ್ರ ಅನುಸರಿಸುತ್ತಿರುವ ಕಾಂಗ್ರೆಸ್ ಗೆ ದೆಹಲಿಯಲ್ಲಿ ಮೈತ್ರಿಗೆ ಆಮ್ ಆದ್ಮಿ ಪಕ್ಷ ನಿರಾಕರಿಸಿದೆ.
ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಲು ಕಾಂಗ್ರೆಸ್ ಆಸಕ್ತಿ ತೋರಿಸಿ ಮಾತುಕತೆಗೆ ಮುಂದಾಗಿತ್ತು. ಆದರೆ ಮೈತ್ರಿಗೆ ಇದು ಸಮಯವಲ್ಲ. ನಾವು ಮೈತ್ರಿಗೆ ಸಿದ್ಧರಿಲ್ಲ. ಈಗ ಸಮಯ ಮೀರಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಗೋಪಾಲ್ ರೈ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ದೆಹಲಿಯಲ್ಲಿ ಕಾಂಗ್ರೆಸ್ ನ್ನೊಂದಿಗೆ ಮೈತ್ರಿ ಮಾಡಬೇಕೆಂದು ಎಎಪಿ ಹಲವು ಸಮಯದಿಂದ ಕಾಯುತ್ತಿತ್ತು ಎನ್ನಲಾಗಿದೆ. ಆದರೆ ಕಾಂಗ್ರೆಸ್ ಮೈತ್ರಿಗೆ ನಿರಾಕರಿಸಿತ್ತು ಎನ್ನಲಾಗಿದೆ. ಆದರೆ, ಇದೀಗ ಚುನಾವಣೆ ಘೋಷಣೆಯಾದ ನಂತರ ಕಾಂಗ್ರಸ್ ಎಎಪಿಯೊಂದಿಗೆ ಮೈತ್ರಿಯ ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದಕ್ಕೆ ಎಎಪಿ ಸರಿಯಾಗಿಯೇ ಪ್ರತ್ಯುತ್ತರ ನೀಡಿದೆ ಎನ್ನಲಾಗಿದೆ.
ಇನ್ನು ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಅವರೇ ವಿರೋಧಿಸಿದ್ದರು. ಈ ಕಾರಣದಿಂದ ಮೈತ್ರಿ ಮಾತುಕತೆ ನಡೆದಿರಲಿಲ್ಲ. ಆದರೆ ಈಗಲೂ ಯಾವುದಾದರೂ ಪಕ್ಷಗಳು ಮೈತ್ರಿಗೆ ಮುಂದಾದರೆ ಅದಕ್ಕೆ ನಾವು ಸಿದ್ಧರಿಲ್ಲ ಎಂದು ಎಎಪಿ ಸ್ಪಷ್ಟಪಡಿಸಿದೆ. ಈ ಎಲ್ಲಾ ಬೆಳವಣಿಗೆಯ ನಂತರ ಮಾರ್ಚ್2 ರಂದೇ ಎಎಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿ, ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿತ್ತು.
ದೆಹಲಿಯಲ್ಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಆದರೆ, ಈ ಬಾರಿ ಮೈತ್ರಿಯ ಭೀತಿ ಬಿಜೆಪಿಗೆ ಎದುರಾಗಿತ್ತು. ಆದರೆ, ಇದೀಗ ಎಎಪಿ ನಿರ್ಧಾರ ಮತ್ತೆ ಬಿಜೆಪಿಯ ಹಾದಿ ಸುಗಮವಾದಂತೆ ಕಾಣುತ್ತಿದೆ.