ತಿರುವನಂತಪುರ,ಮಾ 16 (MSP): ಕೇರಳದ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಜಲಂಧರ್ನ ಬಿಷಪ್ ಫ್ರಾಂಕೊ ಮುಳಕ್ಕಲ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಕ್ರೈಸ್ತ ಸನ್ಯಾಸಿನಿ ಲೂಸಿ ಕಲಪ್ಪುರ ಅವರನ್ನು ಕೆಲಸದಿಂದ ವಜಾಗೊಳಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಕ್ಯಾಥೋಲಿಕ್ ಚರ್ಚ್ ತಿಳಿಸಿದೆ.
ವಯನಾಡು ಜಿಲ್ಲೆಯ ಮಾನಂತವಾಡಿ ಧರ್ಮಪ್ರಾಂತ್ಯದಲ್ಲಿ ಸನ್ಯಾಸಿನಿ ಆಗಿರುವ ಲೂಸಿ ಕಲಪ್ಪುರ ಬಗ್ಗೆ ಹಲವು ಆರೋಪಗಳಿದ್ದು, ಅವುಗಳ ಬಗ್ಗೆ ಅವರು ನೀಡಿದ ವಿವರಣಾತ್ಮಕ ಉತ್ತರಗಳು ತೃಪ್ತಿದಾಯಕವಾಗಿಲ್ಲ ಎಂದು ಚರ್ಚ್ ತಿಳಿಸಿದೆ. ಅವರಿಗೆ ಇನ್ನೊಂದು ಅವಕಾಶ ನೀಡಲಾಗಿದ್ದು, ಧರ್ಮಸಭೆಯಿಂದ ವಜಾಗೊಳಿಸಲಾಗುವುದು ಇಲ್ಲವೇ, ಇನ್ನೊಮ್ಮೆ ಯಾವುದೇ ನೋಟಿಸ್ ನೀಡದೆ ಅಮಾನತುಪಡಿಸಲಾಗುವುದು. ಅವರಿಗೆ ಸಮರ್ಪಕ ಉತ್ತರ ನೀಡಲು ಇನ್ನು ಮೇ 16ರವರೆಗೆ ಸಮಯವಿದೆ ಎಂದು ತಿಳಿಸಲಾಗಿದೆ.
ಇನ್ನು ಚರ್ಚ್ ನೀಡದ ಎಚ್ಚರಿಕೆ ಬಗ್ಗೆ ಮಾತನಾಡಿದ ಸಿಸ್ಟರ್ ಲೂಸಿ ಕಲಪ್ಪುರ ‘ನಾನು 17ನೇ ವಯಸ್ಸಿನಲ್ಲೇ ಸನ್ಯಾಸಿನಿಯಾಗಿದ್ದೇನೆ. ಚರ್ಚ್ ಯಾವುದೇ ಕ್ರಮ ಕೈಗೊಂಡರೂ ಅದನ್ನು ಎದುರಿಸುತ್ತೇನೆ. ನಾನು ಯಾವುದೇ ಅಕ್ರಮದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಬಲವಾಗಿ ನಂಬಿದ್ದೇನೆ’ ಎಂದು ತಿಳಿಸಿದ್ದಾರೆ.
ಲೂಸಿ ಅವರ ವಿರುದ್ಧ ಸುಳ್ಳು ಆರೋಪಗಳನ್ನೂ ಹೊರಿಸಲಾಗಿದೆ. ಅವರು ಕಾರು ಖರೀದಿಸಿ ಐಷರಾಮಿ ಜೀವನ ನಡೆಸುತ್ತಿದ್ದಾರೆ ಮತ್ತು ಚರ್ಚ್ ಒಪ್ಪಿಗೆ ಇಲ್ಲದೆ ಪುಸ್ತಕ ಪ್ರಕಟಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ ಮದರ್ ಅನ್ನಾ ಜೋಸೆಫ್ ಹಾಗೂ ಲೂಸಿ ಅವರು ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಿ ಚರ್ಚ್ ನಾಯಕತ್ವದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಜನವರಿ 1 ರಂದು ಹೇಳಿದ್ದರು. ಚರ್ಚ್ ಅನುಮತಿ ಪಡೆಯದೇ ಫ್ರಾಂಕೊ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.