ಬೆಂಗಳೂರು/ಹಾವೇರಿ ಮಾ 16 (MSP): ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಹೈ ಅಲರ್ಟ್ ಆಗಿರುವ ಆದಾಯ ತೆರಿಗೆ ಇಲಾಖೆ ಅಕ್ರಮದಲ್ಲಿ ತೊಡಗಿರುವವರ ಬೆನ್ನಿಗೆ ಬಿದ್ದಿದ್ದಾರೆ. ಶುಕ್ರವಾರದಂದು ಐಟಿ ಬೇಟೆ ಆರಂಭಿಸಿರುವ ಇಲಾಖೆ ಬೆಂಗಳೂರು ಮತ್ತು ಹಾವೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರಿಗೆ ಸೇರಿದ ಮನೆ, ಹೊಟೇಲ್ ಕೊಠಡಿಗಳ ಮೇಲೆ ದಾಳಿ ನಡೆಸಿ 2.25 ಕೋಟಿ ರೂ ಹಣ ಪತ್ತೆ ಮಾಡಿದ್ದಾರೆ. ಇದು ಕಾಂಗ್ರೆಸ್ ಗೆ ಸೇರಿದ ಹಣ ಎಂದು ಬಿಜೆಪಿಯೂ ಆರೋಪಿಸಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾರಾಯಣಗೌಡ ಪಾಟೀಲ್ ಗುತ್ತಿಗೆದಾರರಿಂದ ಬೃಹತ್ ಮೊತ್ತದ ಹಣ ಪಡೆಯುತ್ತಿದ್ದಾಗ ಐಟಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇನ್ನು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರುವ ಖಾಸಗಿ ಹೋಟೆಲ್ ರೂಂ ಬುಕ್ ಮಾಡಿ ಗುತ್ತಿಗೆದಾರರಿಂದ ಪಡೆದಿದ್ದ ಸುಮಾರು 2 ಕೋಟಿ ರುಪಾಯಿಯನ್ನು 2 ಕೋಣೆಗಳಲ್ಲಿ ಸಂಗ್ರಹಿಸಿಟ್ಟಿರುವುದು ದಾಳಿ ವೇಳೆಗೆ ಪತ್ತೆಯಾಗಿದೆ. ಇದಲ್ಲದೆ ಹಾವೇರಿಯ ನಂದಿನಿ ಲೇಔಟ್ ನಲ್ಲಿರುವ ನಾರಾಯಣಗೌಡ ಪಾಟೀಲ್ ಬಾಡಿಗೆ ಮನೆಯಲ್ಲೂ 25 ಲಕ್ಷ ರೂಪಾಯಿಗೂ ಹೆಚ್ಚು ನಗದು ಹಾಗೂ ಮಹತ್ವದ ದಾಖಲೆಗಳು ಸಿಕ್ಕಿದೆ.
ಐಟಿ ದಾಳಿಯ ಸುಳಿವು ಸಿಗುತ್ತಿದ್ದಂತೆ ಹೊಟೇಲ್ ನಲ್ಲಿದ್ದ ನಾರಾಯಣಗೌಡ ಪರಾರಿಯಾಗಿದ್ದಾರೆ ಆದರೆ ಅವರ ಕಾರು ಚಾಲಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಭಾವಿ ರಾಜಕಾರಣಿಗೆ ಸೇರಿದ ಹಣ:
ನಾರಾಯಣ ಗೌಡ ಮತ್ತು ಕಾರು ಚಾಲಕ ಗುರುವಾರ ಹಾವೇರಿಯಿಂದ ಕಾರಿನಲ್ಲಿ ಬೆಂಗಳೂರಿಗೆ ಹಣ ತಂದಿದ್ದರು. ಈ ಹಣವನ್ನು ಶುಕ್ರವಾರ ಎಲೆಕ್ಷನ್ ಖರ್ಚಿಗಾಗಿ ಪ್ರಭಾವಿ ಸಚಿವರೊಬ್ಬರಿಗೆ ನೀಡಬೇಕೆಂದಿದ್ದರು. ಆ ಸಚಿವರೇ ಗುತ್ತಿಗೆದಾರರಿಂದ ಹಣ ಸಂಗ್ರಹಿಸುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.