ನವದೆಹಲಿ,ಮಾ 16 (MSP): ಪಾಕ್ ನೆಲದಲ್ಲಿ ಸಕ್ರಿಯವಾಗಿರುವ ಉಗ್ರ ಸಮೂಹಗಳನ್ನು ನೆಲಸಮಗೊಳಿಸಬೇಕು ಎಂದು ಜಾಗತಿಕ ಮಟ್ಟದಲ್ಲಿ, ಪಾಕಿಸ್ತಾನದ ಮೇಲೆ ಒತ್ತಡ ಬೀಳುತ್ತಿದ್ದರೂ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಹೊಸ ಗೇಮ್ ಪ್ಲಾನ್ ಹಾಕಿಕೊಂಡಿರುವುದನ್ನು ಭಾರತೀಯ ಗುಪ್ತಚರ ದಳ ಬಹಿರಂಗಗೊಳಿಸಿದೆ.
ಭಾರತೀಯ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಲಾದ ಮಾಹಿತಿಗಳ ಪ್ರಕಾರ, ಪಾಕಿಸ್ತಾನದ ಕುಖ್ಯಾತ ಗೂಢಚಾರ ಸಂಸ್ಥೆ ಐಎಸ್ಐ ಭಾರತದ ಮೇಲೆ ದಾಳಿ ನಡೆಸಲು ನೂತನ ಮಾರ್ಗಗಳನ್ನು ಅನ್ವೇಷಿಸುತ್ತಿದೆ ಎಂದು ಗುಪ್ತಚರ ದಳ ತಿಳಿಸಿದೆ. ಇದಕ್ಕಾಗಿ ಎರಡು ಘೋರ ಭಯೋತ್ಪಾದಕ ಸಂಘಟನೆಗಳಾದ ಜೈಶ್ ಮತ್ತು ತಾಲಿಬಾನ್ ನನ್ನು ಜತೆ ಸೇರಿಸುವ ಪ್ರಯತ್ನಗಳನ್ನು ಐಎಸ್ಐ ಪ್ರಾರಂಭಿಸಿದೆ.
ಇನ್ನೊಂದು ಮಾಹಿತಿ ಪ್ರಕಾರ ಭಾರತವೂ, ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಜೈಶ್ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್ ದಾಳಿ ನಡೆಸುವುದಕ್ಕೆ ಮುನ್ನವೇ ಜೈಶ್, ತಾಲಿಬಾನ್ ಮತ್ತು ಹಕಾನಿ ಉಗ್ರ ಜಾಲದ ಟಾಪ್ ಕಮಾಂಡರ್ಗಳು ಪಾಕಿಸ್ತಾನದಲ್ಲಿ ರಹಸ್ಯ ಸಭೆ ಸೇರಿ ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ.
ಗುಪ್ತ ಸಭೆಯಲ್ಲಿ ಉಗ್ರಸಂಘಟನೆಗಳಾದ ಜೈಶ್, ತಾಲಿಬಾನ್ ಮತ್ತು ಹಕ್ಕಾನಿ ಉಗ್ರ ಜಾಲಗಳು ಒಂದುಗೂಡಿ ಭಾರತದ ವಿರುದ್ಧ ದೊಡ್ಡ ಜಿಹಾದ್ ನಡೆಸಲು ತೀರ್ಮಾನಿಸಿದ್ದವು. ಭಾರತೀಯ ಗುಪ್ತಚರ ದಳ ನೀಡಿದ ಪ್ರಮುಖ ಮಾಹಿತಿಯಂತೆ ಭಾರತೀಯ ಸೇನಾಪಡೆಯ ನೌಕಾದಳ, ವಾಯುಸೇನೆ, ಮತ್ತು ಭೂ ಸೇನೆ ಹೀಗೆ ಮೂರು ವಿಭಾಗಗಳು ದೇಶದ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದು ಉಗ್ರರು ನಡೆಸಬಹುದಾದ ಸಮುದ್ರ ಮಾರ್ಗದ ಜಿಹಾದ್ ಬಗ್ಗೆ ತೀವ್ರ ನಿಗಾ ವಹಿಸಿದೆ.