ಬೆಂಗಳೂರು, ಮಾ 16(SM): ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಪರಿಸರದ ಮೇಲೆ ಅತೀವ ಕಾಳಜಿ ಹೊಂದಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಂಡ ಸಾಲುಮರದ ತಿಮ್ಮಕ್ಕ ಅವರ ಮಹಾನ್ ಕಾರ್ಯಕ್ಕೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಈ ವೇಳೆ ಪ್ರಶಸ್ತಿ ಸ್ವೀಕರಿಸಿದ ತಿಮ್ಮಕ್ಕ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಹರಿಸಿದ್ದಾರೆ. ಸಮಾನ್ಯವಾಗಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಎಲ್ಲರೂ ತಲೆ ಬಾಗಿ ನಮಸ್ಕರಿಸುತ್ತಾರೆ. ಆದರೆ ಹಿರಿಯ ಚೇತನ, ಶತಾಯುಷಿ ‘ವೃಕ್ಷ ಮಾತೆ’ ಮಾತ್ರ ರಾಷ್ಟ್ರಪತಿಗಳ ತಲೆಮುಟ್ಟಿ ಹರಸಿದ್ದಾರೆ.
ಈ ವೇಳೆ ರಾಷ್ಟ್ರಪತಿಯವರು ಮುಗುಳ್ನಕ್ಕರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಾದಲ್ಲಿ ವೈರಲ್ ಆಗುತ್ತಿದೆ. ತಿಮ್ಮಕ್ಕ ಅವರ ಸಾಧನೆ ಬಗ್ಗೆ ಜನ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿಯವರು, 107 ವರ್ಷದ ಸಾಲುಮರದ ತಿಮ್ಮಕ್ಕ ಅವರು ತಮ್ಮ ಹುಟ್ಟೂರಾದ ಕುಡೂರಿನ ಹುಲಿಕಲ್ನಿಂದ ನಾಲ್ಕು ಕಿಲೋ ಮೀಟರ್ ದೂರದವರೆಗೆ ಆಲದ ಮರ ನೆಟ್ಟು ಫೋಷಿಸಿದ್ದಾರೆ. ಇದು ಅವರ ಶ್ರೇಷ್ಟ ಕಾರ್ಯವಾಗಿದೆ. ಇವರ ಸಮಾಜ ಸೇವೆ ಗುರುತಿಸಿ ಪದ್ಮಶ್ರೀ ಪುರಸ್ಕಾರ ಪ್ರದಾನ ಮಾಡಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.
8 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕಗೆ ಈ ಹಿಂದೆ ವೃಕ್ಷ ಮಾತೆ ಎಂಬ ಬಿರುದು ಕೂಡ ನೀಡಲಾಗಿತ್ತು.