ಬೆಂಗಳೂರು, ಮಾ.17(AZM)- ಅನ್ಯ ಮತದಾರರೊಬ್ಬರ ಗುರುತಿನ ಚೀಟಿಯು ಯಾವುದೇ ಒಬ್ಬ ವ್ಯಕ್ತಿಯ ಬಳಿ ಇದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಮಂಜುನಾಥ ಪ್ರಸಾದ್ ಅವರು ಎಚ್ಚರಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಯಾವುದೇ ಅನ್ಯ ಮತದಾರರ ಗುರುತಿನ ಚೀಟಿ ಪಡೆಯುವುದು ಇಲ್ಲವೇ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನಲೆ 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮತದಾರ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಮತದಾರರು ಅಥವಾ ಅವರ ಕುಟುಂಬ ಸದಸ್ಯರ ಬಳಿ ಮಾತ್ರ ಇರಬೇಕು. ಎಂದು ಅವರು ಎಚ್ಚರಿಸಿದ್ದಾರೆ
ಈಗಾಗಲೇ ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹವನ್ನು ಪತ್ತೆ ಹಚ್ಚಲು ಹಲವಾರು ತಂಡಗಳನ್ನು ರಚಿಸಲಾಗಿದ್ದು,ಆಯಾ ತಂಡಗಳು ತಮಗೆ ನಿಗದಿಪಡಿಸಿದ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದರು.
ಅನ್ಯ ಮತದಾರನ ಗುರುತಿನ ಚೀಟಿ ಯಾವುದೇ ಒಬ್ಬ ವ್ಯಕ್ತಿಯ ಕೈಯಲ್ಲಿ ಇದ್ದರೂ ಅಂತಹವರ ವಿರುದ್ಧ ಆಯೋಗಕ್ಕೆ ದೂರು ನೀಡಬಹುದು. ಹಾಗೂ ಆಯೋಗ ದೂರಿನ ಅನ್ವಯ ಆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಅಕ್ರಮ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಈ ಹಿನ್ನಲೆ ಈ ಬಾರಿ ಯಾವುದೇ ಅಕ್ರಮ ಮತದಾರ ಗುರುತಿನ ಚೀಟಿ ಸಂಗ್ರಹವಾಗದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.