ಗೋವಾ, ಮಾ 17(SM): ಗೋವಾ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮಾರ್ಚ್ 17ರ ರವಿವಾರದಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರವಿವಾರದಂದು ವಿಧಿವಶರಾಗಿದ್ದಾರೆ.
ಪರಿಕ್ಕರ್ ಅವರ ಆರಂಭಿಕ ಜೀವನ:
1955ರ ಡಿಸೆಂಬರ್ 13ರಂದು ಮನೋಹರ್ ಪರಿಕ್ಕರ್ ಗೋವಾದ ಮಾಪುಸದಲ್ಲಿ ಜನಿಸಿದ್ದರು. ಮಾರ್ಗೋವಾದ ಲಯೋಲಾ ಪ್ರೌಢಶಾಲೆಯಲ್ಲಿ ಮರಾಠಿಯಲ್ಲಿ ವಿದ್ಯಾಭ್ಯಾಸ ಮಾಡಿದ ಪರಿಕ್ಕರ್, ಐಐಟಿ ಬಾಂಬೆಯಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ನಲ್ಲಿ 1978ರಲ್ಲಿ ಪದವಿ ಪಡೆದರು. ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿ, ಭಾರತದ ರಾಜ್ಯವೊಂದಕ್ಕೆ ಶಾಸಕರಾಗಿ ಆಯ್ಕೆಯಾದ ಮೊದಲ ವ್ಯಕ್ತಿ ಮನೋಹರ್ ಪರಿಕ್ಕರ್ ಎಂಬ ಹೆಗ್ಗಳಿಕೆಯನ್ನು ಅವರು ಪಡೆದುಕೊಂಡಿದ್ದಾರೆ.
ಇನ್ನು ಕಿರಿಯ ವಯಸ್ಸಿನಲ್ಲೇ ಪರಿಕ್ಕರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದ್ದರು. ಐಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ಮೇಲೆ ಮಾಪುಸದಲ್ಲಿ ಆರೆಸ್ಸೆಸ್ ಕೆಲಸಗಳಲ್ಲಿ ಪರಿಕ್ಕರ್ ತೊಡಗಿಸಿಕೊಳ್ಳುತ್ತಿದ್ದರು. ಜತೆಗೆ ವ್ಯಾಪಾರವೊಂದನ್ನು ನಡೆಸುತ್ತಾ, ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಸಂಘ್ ಚಾಲಕ್ ಆದರು. ಆರೆಸ್ಸೆಸ್ ನ ಉತ್ತರ ಗೋವಾ ಘಟಕದಲ್ಲಿ ಸಕ್ರಿಯರಾಗಿ, ರಾಮ ಜನ್ಮ ಭೂಮಿ ಚಳವಳಿ ನಡೆದಾಗ ಸಂಘಟನೆಯ ಪ್ರಮುಖ ಜವಾಬ್ದಾರಿಗಳನ್ನು ಪರಿಕ್ಕರ್ ವಹಿಸಿಕೊಂಡಿದ್ದರು.
ಅಲ್ಲಿಂದ ಬಿಜೆಪಿಗೆ ಬಂದ ಅವರಿಗೆ ತಮ್ಮ ಆರೆಸ್ಸೆಸ್ ಹಿನ್ನೆಲೆ ಬಗ್ಗೆ ಹಿರಿಮೆಯನ್ನು ಹೊಂದಿದ್ದರು. ತಾನು ಶಿಸ್ತು, ಪ್ರಗತಿಪರ ರಾಷ್ಟ್ರೀಯ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿ ಕಲಿತಿದ್ದು ಆರೆಸ್ಸೆಸ್ ನಲ್ಲಿ ಎಂಬ ಭಾವನೆ ಅವರಲ್ಲಿತ್ತು. 1994ರಲ್ಲಿ ತಮ್ಮ ಮೂವತ್ತೆಂಟನೇ ವಯಸ್ಸಿನಲ್ಲಿ ಪರಿಕ್ಕರ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡರು. 1999ರ ಜೂನ್ ನಿಂದ ನವೆಂಬರ್ ತನಕ ಗೋವಾದಲ್ಲಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.
2000ದಲ್ಲಿ ಮನೋಹರ್ ಪರಿಕ್ಕರ್ ಗೋವಾದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಆಯ್ಕೆಗೊಂಡರು. 2002ರಲ್ಲಿ ಅವರು ಎರಡನೇ ಅವಧಿಗೆ ಸಿಎಂ ಆಗಿ ಅಧಿಕಾರವನ್ನು ಪಡೆದುಕೊಂಡರು. ಆದರೆ 2005ರಲ್ಲಿ ಪರಿಕ್ಕರ್ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿಯಿತು. ಬಳಿಕದ 2 ಅವಧಿಗಳಿಗೆ ಗೋವಾ ಆಡಳಿತ ಕಾಂಗ್ರೆಸ್ ಪಾಲಾಯಿತು. ಆದರೆ, 2012ರಲ್ಲಿ ಮತ್ತೆ ಮನೋಹರ್ ಪರಿಕ್ಕರ್ ಬಿಜೆಪಿಯನ್ನು ಗೆಲ್ಲಿಸಲು ಸಫಲರಾದರು. 2014ರ ಲೋಕಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಎರಡೂ ಸ್ಥಾನ ಗೆಲ್ಲಿಸಿಕೊಳ್ಳುವಲ್ಲಿ ಪರಿಕ್ಕರ್ ಮುಂದಾಳುತ್ವದ ಬಿಜೆಪಿ ಶಕ್ತವಾಯಿತು.
ಇದೇ ಕಾರಣದಿಂದ 2014ರಲ್ಲಿ ಮನೋಹರ್ ಪರಿಕ್ಕರ್ ಅವರನ್ನು ರಕ್ಷಣಾ ಖಾತೆ ನಿರ್ವಹಿಸಲು ಪ್ರಧಾನಿಯವರೇ ಆಯ್ಕೆ ಮಾಡಿಕೊಂಡರು. ದೇಶದ ರಕ್ಷಣಾ ಖಾತೆಯನ್ನು ಪರಿಕ್ಕರ್ ಸಮರ್ಥವಾಗಿ ನಿಭಾಯಿಸಿದರು. ರಕ್ಷಣಾ ಇಲಾಖೆಯಲ್ಲಿ ಈ ಹಿಂದೆ ನಡೆದಿದ್ದ ಹಗರಣಗಳನ್ನು ಬಯಲಿಗೆ ತಂದರು. ಅಲ್ಲಿಂದ ಮತ್ತೆ ಗೋವಾ ಸರಕಾರವನ್ನು ನಿಭಾಯಿಸುವ ಜವಾಬ್ದಾರಿ ಪಡೆದುಕೊಂಡ ಅವರು, ಮತ್ತೆ ಗೋವಾ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಾರ್ಚ್ 17ರಂದು ವಿಧಿವಶರಾಗಿದ್ದಾರೆ. ಇನ್ನು ಸುಮಾರು ಹದಿನೆಂಟು ವರ್ಷದ ಹಿಂದೆಯೇ ಮನೋಹರ್ ಪರಿಕ್ಕರ್ ಅವರ ಪತ್ನಿ ತೀರಿಕೊಂಡಿದ್ದರು.