ಮಂಗಳೂರು, ಮಾ 17(SM): ಕೆಲವು ದಿನಗಳ ಹಿಂದೆ ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಸಚಿವ ಯು.ಟಿ. ಖಾದರ್ ಸಹೋದರ ಯು.ಟಿ. ಇಫ್ತಿಕಾರ್ ಅಭ್ಯರ್ಥಿಯೆಂಬ ಗಾಳಿ ಸುದ್ದಿ ಹಬ್ಬಿತ್ತು. ಆದರೆ ಇದೀಗ ಕಾಸರಗೋಡು ಕ್ಷೇತ್ರಕ್ಕೆ ರಾಜ್ ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ನಡುವೆ ಸಹೋದರನಿಗೆ ಟಿಕೆಟ್ ಕೈ ತಪ್ಪಿರುವ ಬಗ್ಗೆ ಸಚಿವ ಖಾದರ್ ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆಯೆಂದರೆ ಗೋಲಿಯಾಟವಲ್ಲ. ಗ್ರಾಮ ಹಾಗೂ ಬೂತ್ ಗಳನ್ನು ನಿಭಾಯಿಸಬೇಕು ಎಂದ ಸಚಿವ ಖಾದರ್, ನನ್ನ ಸಹೋದರನಿಗೆ ಕಾಸರಗೋಡು ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಮಾತುಕತೆಯಾಗಿತ್ತೆಂಬ ವಿಚಾರ ನನಗೆ ಗೊತ್ತಿಲ್ಲ. ಅಷ್ಟಕ್ಕೂ ಆ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದಾರೆ.
ನನ್ನ ಸಹೋದರನಿಗೆ ಸಾಮಾರ್ಥ್ಯ ಇಲ್ಲವೆಂದು ನಾನು ಹೇಳಿಲ್ಲ. ಜನರ ಬಳಿ ಕೆಲಸ ಮಾಡುವ ಅಗತ್ಯತೆ ಇದೆ. ಬೆಂಬಲಿಗರ ಮೂಲಕ ಕರ್ತವ್ಯ ನಿಭಾಯಿಸಬೇಕಾಗುತ್ತದೆ. ಈ ಭಾಗದ ಕೆಲವೊಬ್ಬರು ಇಫ್ತಿಕಾರ್ ಹೆಸರನ್ನು ಸೂಚಿಸಿರಬಹುದು. ಅವರು ಪಕ್ಷದ ಹೈಕಮಾಂಡ್ ಹಾಗೂ ಮುಖಂಡರ ಬಳಿ ಹೆಸರನ್ನು ಸೂಚಿಸಿರಬಹುದು. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳಿಂದಲೇ ನನಗೆ ವಿಚಾರ ತಿಳಿದಿದೆ ಎಂದು ಸಚಿವ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.