ಬೆಂಗಳೂರು, ಮಾ 18 (MSP): ಸರ್ಕಾರಿ ಕಾರಿನ ಬದಲು ಖಾಸಗಿ ಕಾರನ್ನು ಬಳಸುತ್ತಿರುವ ಸಿಎಂ ಅವರ ರೇಂಜ್ ರೋವರ್ ಕಾರಿನಿಂದ ಎರಡು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದ್ದರೂ ಇನ್ನು ದಂಡ ಪಾವತಿಸದೆ ಇರುವುದು ಬೆಳಕಿಗೆ ಬಂದಿದೆ.
ಕಸ್ತೂರಿ ಮೀಡಿಯಾ ಕಂಪನಿ ನೋಂದಾಯಿತ ಪ್ರಸ್ತುತ ಸಿಎಂ ಎಚ್.ಡಿ ಕುಮಾರಸ್ವಾಮಿ ಬಳಸುತ್ತಿರುವ ರೇಂಜ್ ರೋವರ್ ಕಾರು ಫೆಬ್ರವರಿ ತಿಂಗಳಲ್ಲಿ ಎರಡು ಬಾರಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದೆ. ಕಾರು ನಿಯಮವನ್ನು ಉಲ್ಲಂಘನೆ ಮಾಡಿ ಸಂಚರಿಸುವುದು ಸ್ನಿಗಲ್ ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೀಗಾಗಿ ಕಾರು ನೋಂದಾಯಿತ ಕಸ್ತೂರಿ ಮೀಡಿಯಾಕ್ಕೆ ನೋಟಿಸ್ ಕಳುಹಿಸಲಾಗಿದೆ.
ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆಬ್ರವರಿ 10 ರಂದು ರೇಂಜ್ ರೋವರ್ ಕಾರು ಚಾಲನೆ ಮಾಡುತ್ತಿದ್ದ ಸಂದರ್ಭ ಕಾರು ಚಾಲಕ ಮೊಬೈಲ್ ಪೋನ್ ನಲ್ಲಿ ಮಾತನಾಡಿದ್ದಾನೆ. ಇದಲ್ಲದೆ ಫೆಬ್ರವರಿ 22 ರಲ್ಲಿ ಬಸವೇಶ್ವರ ಸರ್ಕಲ್ ನಲ್ಲಿ ಅತ್ಯಂತ ವೇಗದಲ್ಲಿ ಕಾರು ಚಾಲನೆ ಮಾಡಿದ್ದ. ಹೀಗಾಗಿ ಈ ಎರಡು ಅಪರಾಧದ ಹಿನ್ನೆಲೆಯಲ್ಲಿ ಎರಡು ನೋಟಿಸ್ ಗಳನ್ನು ಕಳುಹಿಸಲಾಗಿದ್ದು , ಪ್ರಕರಣವೊಂದಕ್ಕೆ 300 ರೂ. ದಂಡ ವಿಧಿಸಲಾಗಿದೆ.
ಕಂಪನಿಯಿಂದ 600 ರೂ. ದಂಡ ಇನ್ನೂ ಪಾವತಿಯಾಗಿಲ್ಲ. ಸ್ವಯಂ ಪ್ರೇರಿತರಾಗಿ ನಿಗದಿಪಡಿಸಿದ ಸಮಯದೊಳಗೆ ದಂಡ ಪಾವತಿಯಾಗದಿದ್ದರೆ, ಶೀಘ್ರದಲ್ಲಿಯೇ ನಾವೇ ದಂಡ ವಸೂಲಿ ಮಾಡಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.