ಬೆಂಗಳೂರು, ಮಾ 18 (MSP): 'ಅಂಬರೀಶ್ ಬಾಕಿ ಉಳಿಸಿದ ಹಲವು ಕನಸುಗಳನ್ನು ನನಸಾಗಿಸಬೇಕು ಎನ್ನುವುದು ಅಂಬರೀಶ್ ಅಭಿಮಾನಿಗಳ ಮತ್ತು ಮಂಡ್ಯದ ಜನ ಒತ್ತಾಸೆಯಾಗಿದೆ. ಜನರ ಈ ಒತ್ತಾಸೆಗೆ ನಾನು ಬೆಂಬಲ ನೀಡಲಿಲ್ಲ ಎಂದಾದರೆ ಅಂಬರೀಶ್ ಅವರ ಪತ್ನಿಯಾಗಿದ್ದು ಏನೂ ಪ್ರಯೋಜನ ? ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ' ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲೊಂದರಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅವರು, ಚುನಾವಣೆಗೆ ಸ್ಪರ್ಧೆ ಕುರಿತಂತೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿದರು. 'ಅಂಬರೀಶ್ ಎಂದಿಗೂ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ. ಅವರು ಯಾವತ್ತೂ ನಾನು, ನನ್ನ ಕುಟುಂಬ ಎನ್ನಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗಬೇಕಿದೆ. ಇದು ಅವರ ಅಭಿಮಾನಿಗಳ ಒತ್ತಾಸೆ ಕೂಡಾ ಆಗಿದೆ. ನನ್ನ ಈ ನಿರ್ಧಾರ ಹಲವರಿಗೆ ಇಷ್ಟವಾಗದೆ ಇರಬಹುದು. ಆದರೆ ಅಂಬರೀಶ್ ಅವರ ಕನಸನ್ನು ನನದು ಮಾಡಬೇಕಾಗಿದೆ' ಎಂದರು.
'ನೆಮ್ಮದಿಯ ಜೀವನ ಸಾಗಿಸಲು ನಮಗೆ ಯಾವ ಕೊರತೆಯೂ ಇಲ್ಲ. ಆದರೆ ನನಗೂ ನನ್ನ ನಿರ್ಧಾರ ಪ್ರಕಟಿಸಲು ಇದು ಸೂಕ್ತ ಸಮಯವಾಗಿದೆ. ಚುನಾವಣೆ ಎದುರಿಸಲು ಸಾಕಷ್ಟು ಧೈರ್ಯ ಬೇಕು. ಸ್ಯಾಂಡಲ್ ವುಡ್ ನ ಸಂಪೂರ್ಣ ಬೆಂಬಲ ಹಾಗೂ ಮಂಡ್ಯದ ಜನತೆ ಸದಾ ನನ್ನ ಜೊತೆಗಿರುತ್ತಾರೆ ಎಂಬ ವಿಶ್ವಾಸದಿಂದ ನನ್ನ ಅಂತಿಮ ನಿರ್ಧಾರ ಪ್ರಕಟಿಸಿದ್ದೇನೆ' ಎಂದರು.
ಈ ವೇಳೆ ನಟ ಯಶ್, ದರ್ಶನ್, ಅಭಿಷೇಕ್, ದೊಡ್ಡಣ್ಣ, ಜೈಜಗದೀಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ಗಣ್ಯರು ಸಾಥ್ ನೀಡಿದ್ದರು.