ಮಂಗಳೂರು, ಮಾ 19 (MSP): ಮಂಗಳೂರು ಮತ್ತು ಬೆಂಗಳೂರು ನಡುವೆ ಇನ್ನೊಂದು ವಿಮಾನಯಾನ ಸೇವೆಯನ್ನು ಇಂಡಿಗೋ ಆರಂಭಿಸಲಿದೆ. ಇಂಡಿಗೋ ತನ್ನ ಜಾಲಕ್ಕೆ 14 ಹೊಸ ವಿಮಾನಗಳನ್ನು ಸೇರ್ಪಡೆ ಮಾಡುತ್ತಿದ್ದು, ಅದರಲ್ಲಿ ಮಂಗಳೂರು- ಬೆಂಗಳೂರು ಮಾರ್ಗವೂ ಸೇರಿದೆ.
ಹೊಸ ವಿಮಾನಯಾನ ಬೆಳಿಗ್ಗೆ 7.30ಕ್ಕೆ ಬೆಂಗಳೂರಿನಿಂದ ಹೊರಟು 8.40ಕ್ಕೆ ಮಂಗಳೂರು ತಲುಪಲಿದೆ. ಬಳಿಕ 9.30ಕ್ಕೆ ಮಂಗಳೂರಿನಿಂದ ಹೊರಟು 10.30ಕ್ಕೆ ಬೆಂಗಳೂರು ತಲುಪಲಿದೆ.
ಇದಲ್ಲದೇ ಇಂಡಿಗೋ ಚೆನ್ನೈ- ರಾಯಪುರ, ಹೈದರಾಬಾದ್- ಗೋರಖ್ಪುರ ಮತ್ತು ಕೋಲ್ಕತ್ತಾ– ಗೋರಖ್ಪುರಗಳ ನಡುವೆ ತನ್ನ ಮೊದಲ ವಿಮಾನವನ್ನು ಆರಂಭಿಸಲಿದೆ. ಪ್ರಸ್ತುತ ಚೆನ್ನೈ- ತಿರುವನಂತಪುರ, ಬೆಂಗಳೂರು- ಉದಯಪುರ ಮತ್ತು ಬೆಂಗಳೂರು- ಚೆನ್ನೈ ಮಾರ್ಗಗಳಿಗೆ ಹೆಚ್ಚು ವಿಮಾನಗಳ ಸೇರ್ಪಡೆ ಮಾಡಲಿದೆ. ಎಲ್ಲ ಹೊಸ ಸೇವೆಗಳು ಏಪ್ರಿಲ್ನಿಂದ ಪ್ರಾರಂಭಗೊಳ್ಳುತ್ತವೆ.
'ನಮ್ಮ ಜಾಲಕ್ಕೆ ಚೆನ್ನೈ, ರಾಯಪುರ ಮತ್ತು ಗೋರಖ್ಪುರ ಸಂಪರ್ಕಿಸುವ 14 ಹೊಸ ವಿಮಾನಗಳನ್ನು ಸೇರ್ಪಡೆ ಮಾಡಲು ಬಹಳ ಉತ್ಸುಕರಾಗಿದ್ದೇವೆ. ಇಂಡಿಗೋ ಭಾರತೀಯ ಮಾರುಕಟ್ಟೆಯಲ್ಲಿ 12 ಯಶಸ್ವಿ ವರ್ಷಗಳ ಕಾರ್ಯಾಚರಣೆಯನ್ನು ಕಡಿಮೆ ವೆಚ್ಚದ ಸಂಸ್ಥೆಯಾಗಿ ಪೂರೈಸಿದೆ. ನಮ್ಮ ಜಾಲಕ್ಕೆ ಹೊಸ ವಿಮಾನಗಳ ಸೇರ್ಪಡೆ ಮಾಡುವ ಮೂಲಕ ಕನೆಕ್ಟಿವಿಟಿಯನ್ನು ಗ್ರಾಹಕರಿಗೆ ಮತ್ತಷ್ಟು ಹೆಚ್ಚಿಸುತ್ತಿದ್ದೇವೆ' ಎಂದು ಇಂಡಿಗೋ ಚೀಫ್ ಕಮರ್ಷಿಯಲ್ ಆಫೀಸರ್ ವಿಲಿಯಂ ಬೌಟ್ಲರ್ ತಿಳಿಸಿದ್ದಾರೆ.