ಬೆಂಗಳೂರು,ಮಾ 19 (MSP): ನಾನಿನ್ನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧರಿಸಿಲ್ಲ. ನನ್ನ ವಯಸ್ಸು ಈಗಾಗಲೇ 86 ವರ್ಷ ಕಳೆದಿದೆ. ಹೀಗಾಗಿ ಇಳಿ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನು ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಾ.19ರ ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ನನ್ನ ಸ್ಪರ್ಧೆ ಬಗ್ಗೆ ಸಾಕಷ್ಟು ಕುತೂಹಲವಿರುವುದು ನನಗೆ ತಿಳಿದಿದೆ. ದೆಹಲಿಯಲ್ಲಿ ನನ್ನ ಅಗತ್ಯ ಎಷ್ಟಿದೆ ಎಂಬುದನ್ನೂ ನೋಡುತ್ತಿದ್ದೇನೆ. ನಾನು ಸ್ಪರ್ಧಿಸಬೇಕು ಎನ್ನುವ ಒತ್ತಡವನ್ನು ಹಲವಾರು ಮಂದಿ ಹೇರುತ್ತಿದ್ದಾರೆ. ಯಾವುದಕ್ಕೂ ನಾನು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
3 ವರ್ಷಗಳ ಹಿಂದೆ ಹಾಸನ ಕ್ಷೇತ್ರವನ್ನು ನಾನು ಪ್ರಜ್ವಲ್ ಗೆ ಬಿಟ್ಟುಕೊಡುವುದಾಗಿ ಹೇಳಿದ್ದೆ. ಅದರಂತೆ ಈ ವರ್ಷ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಸಮ್ಮಿಶ್ರ ಸರ್ಕಾರದ ಮೂಲ ಉದ್ದೇಶ ಕೋಮು ಶಕ್ತಿಯನ್ನು ತಡೆಗಟ್ಟುವುದು. ರಾಜ್ಯದಲ್ಲಿ ಉಭಯ ಪಕ್ಷಗಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದ್ದರೂ ನಾನು, ಸಿದ್ದರಾಮಯ್ಯ ಹೊಣೆ ಹೊರುತ್ತೇವೆ. ಬಿಕ್ಕಟ್ಟು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಇಂದಿನ ಸಭೆಯಲ್ಲಿ ಎಲ್ಲಾ ವಿಚಾರಗಳಲ್ಲಿ ನಾವು ವಿಸ್ತೃತ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವೆಲ್ಲಾ ಕ್ಷೇತ್ರಗಳಲ್ಲೂ ಭಿನ್ನಾಭಿಪ್ರಾಯವಿದೆಯೋ, ನಾನು ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್, ದಿನೇಶ್ ಗುಂಡೂರಾವ್, ಸಿಎಂ , ಖಂಡ್ರೆ ಎಲ್ಲರೂ ಇದ್ದೀವಿ ಪರಿಹಾರ ಮಾಡುತ್ತೇವೆ. ಪ್ರಚಾರಕ್ಕೆ ನಮಗೆ ಬಹಳ ಕಡಿಮೆ ಸಮಯವಿದ್ದು ಒಟ್ಟಾಗಿ ಪ್ರಚಾರ ಮಾಡ್ತೇವೆ ಎಂದು ದೇವೇಗೌಡರು ತಿಳಿಸಿದರು.