ನವದೆಹಲಿ, ಮಾ 20(MSP): ಮೈ ಭೀ ಚೌಕಿದಾರ್ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಯಾನದ ಕುರಿತು ವ್ಯಂಗ್ಯವಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ”ನಿಮ್ಮ ಮಕ್ಕಳು ವಾಚ್ಮನ್ (ಚೌಕಿದಾರ) ಆಗಬೇಕು ಎಂದು ನಿಮಗೆ ಅನ್ನಿಸಿದ್ರೆ ಬಿಜೆಪಿಗೆ ಮತ ಹಾಕಿ " ಎಂದಿದ್ದಾರೆ.
ಲೋಕಸಭೆ ಚುನಾವಣೆ 2019 ರ ಚುನಾವಣೆಯಲ್ಲಿ ಬಿಜೆಪಿಯೂ ಮೈ ಭೀ ಚೌಕಿದಾರ್ ಸ್ಲೋಗನನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದ್ದು, ಇದರ ವಿರುದ್ದ ಸಿಎಂ ಕ್ರೇಜಿವಾಲ್ ಟೀಕಿಸಿದ್ದಾರೆ. ಮಕ್ಕಳು ಚೌಕಿದಾರ ಆಗಬೇಕು ಎಂದರೆ ಬಿಜೆಪಿಗೆ ಮತ ಹಾಕಬಹುದು ಆದರೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದರೆ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ ಎಂದು ಕೇಜ್ರಿವಾಲ್ ಜನತೆಯನ್ನು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್, ಮೋದಿ ಇಡೀ ದೇಶವನ್ನು ಚೌಕಿದಾರನನ್ನಾಗಿ ಮಾಡುವ ಪ್ರಯತ್ನದಲ್ಲಿದ್ದಾರೆ. ನಿಮ್ಮ ಮಕ್ಕಳು ಕಾವಲುಗಾರನಾಗಬೇಕು ಎಂದರೆ ನರೇಂದ್ರ ಮೋದಿಗೆ ಮತ ಹಾಕಿ. ಉತ್ತಮ ಶಿಕ್ಷಣ ಪಡೆದು ಡಾಕ್ಟರ್, ಇಂಜಿನಿಯರ್ ಅಥವಾ ವಕೀಲರು ಆಗಬೇಕು ಎಂದರೆ ಎಎಪಿಗೆ ಮತ ಹಾಕಿ ಎಂದಿದ್ದಾರೆ.
ಶನಿವಾರಷ್ಟೇ ಪ್ರಧಾನಿ ಮೋದಿ 'ಮೈ ಭೀ ಚೌಕಿದಾರ' ಅಭಿಯಾನಕ್ಕೆ ಕರೆ ನೀಡಿದ್ದು, ಮೋದಿ ತಮ್ಮ ಟ್ವೀಟರ್ ಖಾತೆಯ ಪ್ರೊಫೈಲ್ ಹೆಸರನ್ನು 'ಚೌಕಿದಾರ್ ನರೇಂದ್ರ ಮೋದಿ' ಎಂದು ಬದಲಾಯಿಸಿಕೊಂಡಿದ್ದಾರೆ.