ಮಂಡ್ಯ,ಮಾ.20(AZM): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, ಸುಮಲತಾ ಅಂಬರೀಶ್ ಅವರು ಇಂದು ನಾಮಪತ್ರ ಸಲ್ಲಿಸಿದ್ದು. ಜೊತೆಯಾಗಿ ತಮ್ಮೊಂದಿಗೆ ಇದ್ದ ಹಣ, ಆಸ್ತಿ, ಸಂಪತ್ತಿನ ವಿವರದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.
ಸುಮಲತಾ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇದೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲ ಇದೆ.
ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ನಿವಾಸದಿಂದ ನೇರವಾಗಿ ಮಂಡ್ಯ ಡಿಸಿ ಕಚೇರಿಗೆ ಆಗಮಿಸಿದ ಸುಮಲತಾ ಅವರು 3 ಸೆಟ್ಗಳಲ್ಲಿ ನಾಮಪತ್ರ ಸಲ್ಲಿಸಿದರು. ಪ್ರತಿ ಸೆಟ್ ನಲ್ಲಿ ತಲಾ 10 ಸೂಚಕರ ಹೆಸರನ್ನು ಉಲ್ಲೇಖಿಸಿದ್ದರು.
ಸುಮಲತಾರವರು ದಲಿತ, ಕುರುಬ, ಗಂಗಾಮತಸ್ಥ, ಮುಸ್ಲಿಂ ನಾಯಕರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಡಿಸಿ ಕಚೇರಿ ಹೊರಗಡೆ ಸುಮಲತಾ ಪರ ಜೈಕಾರ, ಘೋಷಣೆಗಳು ಕೇಳಿಬಂದವು.
ಸುಮಲತಾ ಅವರಿಗೆ ಪುತ್ರ ಅಭಿಷೇಕ್, ಅಂಬರೀಶ್ ಸಹೋದರ ಪುತ್ರ ಮಧುಸೂದನ್, ಅಂಬಿ ಆಪ್ತರಾದ ರಾಕ್ಲೈನ್ ವೆಂಕಟೇಶ್, ಶ್ರೀನಿವಾಸ್ ಅವರು ಸೇರಿದಂತೆ ಆತೃಪ್ತ ಕಾಂಗ್ರೆಸ್ ಮುಖಂಡರು, ಬಿಜೆಪಿಯ ಸತೀಶ್ ರೆಡ್ಡಿ ಸಾಥ್ ನೀಡಿದ್ದಾರೆ.