ಧಾರವಾಡ,ಮಾ21(AZM): ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತೆ ಹೆಚ್ಚಾಗಿದ್ದು 12ಕ್ಕೆ ಏರಿದೆ.
ಇಂದು ಅವಶೇಷಗಳಡಿಯಿಂದ 8 ವರ್ಷದ ಬಾಲಕಿ ಸೇರಿದಂತೆ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಪಡೆ ಸತತ 50 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿ ನಬೀಸಾಬ್ ನದಾಫ್ ಹಾಗೂ ಪ್ರೇಮಾ ಉಣಕಲ್ ಅವರನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಸಂಜೆ ವೇಳೆಗೆ ಮತ್ತಿಬ್ಬರ ದೇಹಗಳನ್ನು ಹೊರತೆಗೆಯಲಾಗಿದ್ದು ಈ ವರೆಗೆ ಒಟ್ಟು 12 ಮಂದಿ ಮೃತಪಟ್ಟಂತಾಗಿದೆ.
ಇನ್ನು ಕೆಲವರು ಕೆಳ ಮಹಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಅವರನ್ನು ಹೊರತೆಗೆಯಲು ಪ್ರಯತ್ನ ಮುಂದುವರಿಸಿದ್ದಾರೆ. ನಿನ್ನೆ ರಾತ್ರಿಯಿಂದ ಸತತವಾಗಿ ಈ ಭಾಗಕ್ಕೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಬದುಕಿ ಬಂದಿರುವ ವಿದ್ಯಾರ್ಥಿ ನಬೀ ಸಾಬ್ ಅವರು ಧಾರವಾಡ ಜಿಲ್ಲೆಯ ಕಲಘಟಗಿ ಮೂಲದವರು. ಹಾಗೂ ಪ್ರೇಮಾ ಉಣಕಲ್ ಅವರು ಧಾರವಾಡದವರು ಎಂದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದ್ದು, ತಳ ಮಹಡಿಯಲ್ಲಿ ಪಾರ್ಕಿಂಗ್ನಲ್ಲಿದ್ದ ದ್ವಿಚಕ್ರ ಮತ್ತಿತರ ವಾಹನಗಳು ಜಖಂಗೊಂಡಿದ್ದು, ಅವುಗಳನ್ನು ರಕ್ಷಣಾ ಪಡೆ ಹೊರತೆಗೆಯುತ್ತಿದೆ. ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎನ್ಡಿಆರ್ಎಫ್ ತಿಳಿಸಿದೆ.