ನವದೆಹಲಿ, ಮಾ 29 (DaijiworldNews/DB): ಸಂಸತ್ತಿನಿಂದ ರಾಹುಲ್ ಅನರ್ಹಗೊಂಡಾಗ ಸಹಾಯಕ್ಕೆ ಕಾಂಗ್ರೆಸ್ನ ಯಾವುದೇ ವಕೀಲರೂ ಯಾಕೆ ಬಂದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಸಹಾಯಕ್ಕೆ ಅವರ ಪಕ್ಷದ ವಕೀಲರೇ ಬಂದಿಲ್ಲ ಎಂಬುದನ್ನು ನೋಡುವಾಗ ಸ್ವಪಕ್ಷದೊಳಗಿನ ಉದ್ದೇಶಪೂರ್ವಕ ಷಡ್ಯಂತ್ರಕ್ಕೆ ರಾಹುಲ್ ಬಲಿಯಾದರು ಎಂದೇ ಅನಿಸುತ್ತದೆ ಎಂದಿದ್ದಾರೆ.
ರಾಹುಲ್ ಗಾಂಧಿಯವರು ಸಡಿಲ ಫಿರಂಗಿ ಮತ್ತು ಸರಣಿ ಅಪರಾಧಿ. ಅವರು ಮಾನನಷ್ಟ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಗೊಳಗಾದಾಗ ಅಥವಾ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಾಗ ಅವರ ಸಹಾಯಕ್ಕೆ ಬಾರದ ಕಾಂಗ್ರೆಸ್ನ ವಕೀಲರು ಪವನ್ ಖೇರಾ ಅವರಿಗೆ ರಕ್ಷಣೆ ನೀಡಿದ್ದರು. ಇದರರ್ಥ ಆ ಪಕ್ಷದೊಳಗೇ ರಾಹುಲ್ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂದಲ್ಲವೇ ಎಂದು ಠಾಕೂರ್ ಪ್ರಶ್ನಿಸಿದರು.
ರಾಹುಲ್ ಗಾಂಧಿಯವರ ವಿರುದ್ದ ಅವರ ಪಕ್ಷದೊಳಗೇ ಸಂಚು ರೂಪಿಸಲಾಗುತ್ತಿದೆ. ಆದರೆ ಅವರು ಯಾರೆಂದು ಗೊತ್ತಿಲ್ಲ. ಇನ್ನು ಕೇಂದ್ರ ಸರ್ಕಾರವಾಗಲೀ, ಲೋಕಸಭೆಯ ಸಚಿವಾಲಯವಾಗಲೀ ರಾಹುಲ್ ಅನರ್ಹತೆ ವಿಚಾರದಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂದರು.